ರಾಯಪುರ (ಛತ್ತೀಸ್‌ಗಢ): ನಟ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಆದಿಪುರುಷ ಬಗ್ಗೆ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗುತ್ತಿದೆ. ಇದರ ನಡುವೆ ಕೇಂದ್ರ ಸಚಿವೆ ರೇಣುಕಾ ಸಿಂಗ್ ಅವರು ಚಿತ್ರದಲ್ಲಿ ರಾಮ, ಜಾನಕಿ, ಹನುಮಾನ್ ಮತ್ತು ಇತರ ಪಾತ್ರಗಳನ್ನು ಚಿತ್ರಿಸಿರುವ ರೀತಿ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ. ಅಲ್ಲದೇ, ಛತ್ತೀಸ್‌ಗಢದಲ್ಲಿ ಆದಿಪುರುಷ ಚಲನಚಿತ್ರವನ್ನು ನಿಷೇಧಿಸುವ ಭರವಸೆಯಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಛತ್ತೀಸ್‌ಗಢದ ಸುರ್ಗುಜಾದ ಲೋಕಸಭಾ ಸದಸ್ಯೆ ಹಾಗೂ ಕೇಂದ್ರ ಬುಡಕಟ್ಟು ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ರೇಣುಕಾ ಸಿಂಗ್, ಆದಿಪುರುಷ ಚಿತ್ರವು ರಾಮಾಯಣವನ್ನು ಆಧರಿಸಿದೆ. ಚಿತ್ರದಲ್ಲಿ ನಮ್ಮ ಶ್ರೀರಾಮ, ಮಾತಾ ಜಾನಕಿ, ವೀರ ಹನುಮಾನ್ ಮತ್ತು ಇತರ ಪಾತ್ರಗಳನ್ನು ಚಿತ್ರಿಸಿರುವ ರೀತಿ ಮತ್ತು ಪಾತ್ರಗಳ ಸಂಭಾಷಣೆಗಳಿಂದ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಮುಂದುವರೆದು, ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಶ್ರೀರಾಮನ ತಾಯಿಯ ತವರು ನೆಲದಲ್ಲಿ ಈ ಚಲನಚಿತ್ರವನ್ನು ನಿಷೇಧಿಸುವ ಆದೇಶವನ್ನು ಶೀಘ್ರದಲ್ಲೇ ಹೊರಡಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಕೇಂದ್ರ ಸಚಿವೆ ರೇಣುಕಾ ಸಿಂಗ್ ಟ್ವೀಟ್ ಮಾಡಿದ್ದಾರೆ. ಛತ್ತೀಸ್‌ಗಢವು ಶ್ರೀರಾಮನ ತಾಯಿ ಕೌಶಲ್ಯೆಯ ಜನ್ಮಸ್ಥಳ ಎಂದು ನಂಬಲಾಗಿದೆ.
ಇದನ್ನೂ ಓದಿ:Adipurush: 'ಆದಿಪುರುಷ'ನಿಗೆ ಭಾರಿ ಆಕ್ಷೇಪ; ವಿವಾದಿತ ಸಂಭಾಷಣೆ ಬದಲಿಸಲು ಚಿತ್ರತಂಡ ನಿರ್ಧಾರ