ಮಥುರಾ(ಉತ್ತರ ಪ್ರದೇಶ):ಯಮುನಾ ಎಕ್ಸ್ಪ್ರೆಸ್ ವೇ ಸರ್ವೀಸ್ ರಸ್ತೆಯಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಬಳಿ ಶುಕ್ರವಾರ ಕೆಂಪು ಬಣ್ಣದ ಟ್ರಾಲಿ ಸೂಟ್ಕೇಸ್ನಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿತ್ತು. ಈ ಮೃತದೇಹ ದೆಹಲಿಯ ಮೋಡ್ಬಂದ್ ಎಂಬ ಪ್ರದೇಶದ ನಿವಾಸಿ ನಿತೇಶ್ ಯಾದವ್ ಅವರ ಪುತ್ರಿ ಆಯುಷಿ ಯಾದವ್ (21) ಅವರದ್ದಾಗಿದ್ದು, ತಂದೆಯೇ ಮರ್ಯಾದೆಗೆ ಅಂಜಿ ಗುಂಡಿಕ್ಕಿ ಕೊಂದಿರುವುದು ವಿಚಾರಣೆ ವೇಳೆ ಬಯಲಾಗಿದೆ.
ತಮ್ಮ ಒಬ್ಬಳೇ ಮಗಳನ್ನು ಮರ್ಯಾದೆಗೆ ಹೆದರಿ ಗುಂಡಿಕ್ಕಿ ಕೊಂದಿರುವುದಾಗಿ ಆರೋಪಿ ತಂದೆ ಒಪ್ಪಿಕೊಂಡಿದ್ದಾನೆ. ನ.17 ರಂದು ಮಧ್ಯಾಹ್ನ ಕೊಲೆ ನಡೆದಿದ್ದು, ಮೃತದೇಹವನ್ನು ಸೂಟ್ಕೇಸ್ನಲ್ಲಿ ತುಂಬಿ ತನ್ನದೇ ಕಾರಿನಲ್ಲಿ ತಂದು ಯಮುನಾ ಎಕ್ಸ್ಪ್ರೆಸ್ ವೇ ಸರ್ವಿಸ್ ರಸ್ತೆಯಲ್ಲಿ ಎಸೆದು ಹೋಗಿದ್ದಾನೆ. ಮಗಳು ತನಗೆ ಹೇಳದೆ ಎಲ್ಲೋ ಹೋಗಿದ್ದಳು, ಮನೆಗೆ ಬಂದ ತಕ್ಷಣ ಹೊಡೆದು ಕೋಪದಲ್ಲಿ ಗುಂಡು ಹಾರಿಸಿದ್ದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ.