ಪಾಣ್ಯಂ (ಆಂಧ್ರ ಪ್ರದೇಶ):ಕುಟುಂಬದ ಮಾನ ಮರ್ಯಾದೆ ಹೋಯಿತು ಎಂದು ಆಕ್ರೋಶಗೊಂಡ ತಂದೆಯು ತನ್ನ ಪುತ್ರಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಮರ್ಯಾದ ಹತ್ಯೆ ಪ್ರಕರಣ ನಂದ್ಯಾಲ ಜಿಲ್ಲೆಯ ಪಾಣ್ಯಂ ಮಂಡಲದಲ್ಲಿ ಬೆಳಕಿಗೆ ಬಂದಿದೆ. ಪಾಣ್ಯಂ ಎಸ್ಐ ಸುಧಾಕರ ರೆಡ್ಡಿ ಪ್ರಕಾರ, ಆಲಮೂರು ಗ್ರಾಮದ ದೇವೇಂದ್ರ ರೆಡ್ಡಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳು ಪ್ರಸನ್ನಾ (21) ಎರಡು ವರ್ಷಗಳ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ವಿವಾಹವಾಗಿದ್ದಳು. ಅವರು ಹೈದರಾಬಾದ್‌ನಲ್ಲಿ ನೆಲೆಸಿದ್ದರು. ಪುತ್ರಿ ಪ್ರಸನ್ನಾ ಮದುವೆಗೂ ಮುನ್ನ ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಈತನ ಜೊತೆ ಸಂಪರ್ಕ ಬೆಳೆಸಿದ್ದಳು. ಇತ್ತೀಚೆಗಷ್ಟೇ ಹೈದರಾಬಾದಿನಿಂದ ಗ್ರಾಮಕ್ಕೆ ಬಂದಿದ್ದಳು. ಆದರೆ, ಮತ್ತೆ ಗಂಡನ ಬಳಿಗೆ ಹೋಗಿರಲಿಲ್ಲ.
ಪುತ್ರಿಯ ತಲೆ, ದೇಹ ಬೇರ್ಪಡಿಸಿ ಎಸೆದ ತಂದೆ: ತನ್ನ ಕುಟುಂಬದ ಮರ್ಯಾದೆ ಹೋಗಿದೆ ಎಂದು ಭಾವಿಸಿದ ಪ್ರಸನ್ನಾ ತಂದೆ ದೇವೇಂದ್ರ ರೆಡ್ಡಿ ಮಗಳ ಮೇಲೆ ಕೋಪಗೊಂಡಿದ್ದರು. ಫೆ.10ರಂದು ಮನೆಯಲ್ಲಿಯೇ ತಂದೆಯೇ ಮಗಳ ಕತ್ತು ಹಿಸುಕಿ ಕೊಲೆ ಮಾಡಿ ಘಟನೆ ನಡೆದಿದೆ. ಆರೋಪಿ ತಂದೆ ಸೇರಿದಂತೆ ಕೆಲವರು ಜತೆಗೂಡಿ ಕಾರಿನಲ್ಲಿ ಶವವನ್ನು ನಂದ್ಯಾಲ-ಗಿದ್ದಲೂರು ಮಾರ್ಗದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ತಲೆ ಮತ್ತು ದೇಹವನ್ನು ಬೇರ್ಪಡಿಸಿದ್ದಾರೆ. ತಲೆ ಒಂದೆಡೆ ಹಾಗೂ ದೇಹವನ್ನು ಇನ್ನೊಂದೆಡೆ ಎಸೆದಿದ್ದಾರೆ. ನಂತರ ಸ್ಥಳದಿಂದ ಹಿಂದುರುಗಿ ಹೋಗಿದ್ದಾರೆ.
ಪೊಲೀಸರಿಂದ ತನಿಖೆ ಆರಂಭ:ಮೊಮ್ಮಗಳು ಇತ್ತೀಚೆಗೆ ಕರೆ ಮಾಡದ ಕಾರಣ ಅಜ್ಜ ಶಿವಾ ರೆಡ್ಡಿಗೆ ಅನುಮಾನ ಬಂದಿದ್ದು, ಮೊಮ್ಮಗಳು ಪ್ರಸನ್ನಾ ಎಲ್ಲಿಗೆ ಹೋಗಿದ್ದಾಳೆ ಎಂದು ವಿಚಾರಿಸಿದ್ದಾರೆ. ಕುಟುಂಬದ ಮಾನ ಮರ್ಯಾದೆ ಹೋಯಿತು ಎಂಬ ಕಾರಣಕ್ಕೆ ಮಗಳನ್ನು ಕೊಂದಿರುವುದಾಗಿ ದೇವೇಂದ್ರ ರೆಡ್ಡಿ ತಂದೆಗೆ ತಿಳಿಸಿದ್ದಾರೆ. ತಕ್ಷಣವೇ ಅಜ್ಜ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಗುರುವಾರ ದೇವೇಂದ್ರ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.