ಜಲಗಾಂವ್ (ಮಹಾರಾಷ್ಟ್ರ): ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ ನಡೆದಿದೆ. ಅಪ್ರಾಪ್ತ ವಯಸ್ಸಿನ ಸಹೋದರನೊಬ್ಬ ತನ್ನ ಅಕ್ಕನನ್ನು ಕತ್ತು ಹಿಸುಕಿ ಹಾಗೂ ಆಕೆಯ ಪ್ರಿಯಕರನನ್ನು ಗುಂಡಿಕ್ಕಿ ಕೊಂದ ಪ್ರಕರಣ ನಡೆದಿದೆ. ಜೋಡಿ ಕೊಲೆ ಮಾಡಿದ ನಂತರ ಆರೋಪಿ ಸಹೋದರ ತನ್ನ ಸ್ವಂತ ಪಿಸ್ತೂಲ್‌ನೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ.
ಮೃತರನ್ನು ರಾಕೇಶ್ ಸಂಜಯ್ ರಜಪೂತ್ (22) ಮತ್ತು ವರ್ಷಾ ಸಾಧನ್ ಕೋಲಿ (20) ಎಂದು ಗುರುತಿಸಲಾಗಿದೆ. ಇಬ್ಬರ ಮೃತ ದೇಹಗಳು ಚೋಪ್ಡಾ ನಗರದ ಜುನಾ ವರದ್ ಶಿವರಾದಲ್ಲಿ ಪತ್ತೆಯಾಗಿವೆ.
ಈ ಕೃತ್ಯವನ್ನು ಮೃತ ವರ್ಷಾರ ಸಹೋದರ ಮತ್ತು ಇತರ ಮೂವರು ಸೇರಿಕೊಂಡು ಎಸಗಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಸಹೋದರ ಪೊಲೀಸ್ ಠಾಣೆಗೆ ಶರಣಾಗಿದ್ದು, ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು ಕೂಡ ಅಪ್ರಾಪ್ತರೇ ಆಗಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.