ಲೂಧಿಯಾನ (ಪಂಜಾಬ್):ಸಹೋದರನೊಬ್ಬ ತನ್ನ ಸಹೋದರಿಯನ್ನೇ ಕೊಂದು ಆಕೆಯ ಪತಿಗೆ ಗುಂಡು ಹಾರಿಸಿ ಗಾಯಗೊಳಿಸಿರುವ ಮರ್ಯಾದೆಗೇಡು ಹತ್ಯೆ ಪ್ರಕರಣ ಲೂಧಿಯಾನದ ಪೊಲೀಸ್ ಠಾಣೆ ಪಿಎಯು ವ್ಯಾಪ್ತಿಯ ಪಂಜ್‌ಪಿರ್ ರಸ್ತೆ ಕಾರ್ಪೊರೇಷನ್ ಕಾಲೋನಿಯಲ್ಲಿ ನಡೆದಿದೆ.
ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಸಹೋದರಿ ಸಂದೀಪ್ ಕೌರ್ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಪತಿ ರವಿಕುಮಾರ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸೂರಜ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನ ಬಳಿಯಿದ್ದ 32 ಬಾರ್ ಕಂಟ್ರಿ ಪಿಸ್ತೂಲ್, 2 ಮ್ಯಾಗಜೀನ್ ವಶಕ್ಕೆ ಪಡೆಯಲಾಗಿದೆ.
ತಮ್ಮ ಸಂಸ್ಥೆಯ ನೌಕರನ ಜೊತೆ ಸೋದರಿ ಸಂದೀಪ್ ಓಡಿಹೋಗಿದ್ದಳು. ಅಷ್ಟೇ ಅಲ್ಲದೇ ಆತನೊಂದಿಗೆ ಮದುವೆ ಮಾಡಿಕೊಂಡಿದ್ದಳು. ಇದರಿಂದ ಕುಪಿತಗೊಂಡಿದ್ದ ಸೋದರ ಆಕೆಯ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದ.
ಆರೋಪಿ ಸೂರಜ್ನ ತಂದೆ ಭೂಪಿಂದರ್ ಸಿಂಗ್ ಕೌರ್ ಒಬ್ಬ ಫೈನಾನ್ಸಿಯರ್. ಸಂತ್ರಸ್ತ ರವಿ ಎಂಬಾತ ಹಲವಾರು ವರ್ಷಗಳಿಂದ ಅವರ ಫೈನಾನ್ಸ್‌ನಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಭೂಪಿಂದರ್ ಸಿಂಗ್ ಕುಟುಂಬದ ಜತೆ ರವಿಕುಮಾರ್ ಅನ್ಯೋನ್ಯತೆ ಬೆಳೆಸಿಕೊಂಡು ಆತ್ಮೀಯರಾಗಿದ್ದನು. ಆಗಾಗ್ಗೆ ಅವರ ಮನೆಗೂ ಭೇಟಿ ನೀಡುತ್ತಿದ್ದ. ಕ್ರಮೇಣ ರವಿ ಹಾಗೂ ಸಂದೀಪ್ ಪ್ರೀತಿಸುತ್ತಿದ್ದರು. ಜುಲೈ 21ರಂದು ಮನೆಯಿಂದ ಓಡಿ ಹೋಗಿದ್ದು, 29ರಂದು ವಿವಾಹವಾಗಿದ್ದರು ಎಂದು ಎಡಿಸಿಪಿ ಶುಭಂ ಅಗರ್ವಾಲ್ ಮಾಹಿತಿ ನೀಡಿದ್ದಾರೆ.