ಹರಿಯಾಣ/ಚಂಡೀಗಢ:ಲೈಂಗಿಕ ಶೋಷಣೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿವಾದಿತ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಂಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ಆಸ್ಪತ್ರೆಯಲ್ಲಿ ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿರುವ ಈ ವ್ಯಕ್ತಿ ತನ್ನನ್ನು ನೋಡಿಕೊಳ್ಳಲು ಹನಿಪ್ರೀತ್ ಬರಬೇಕೆಂದು ಹಠ ಹಿಡಿದಿದ್ದ. ಅದರಂತೆ ಹನಿಪ್ರೀತ್ ಆತನ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಜೈಲಿನಲ್ಲಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಜೂನ್ 6 ರಂದು ಆರೋಗ್ಯ ತಪಾಸಣೆಗಾಗಿ ಅವರನ್ನು ಗುರುಗ್ರಾಮದ ಮೇದಂತ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಕೊರೊನಾ ಟೆಸ್ಟ್ಗೆ ಒಳಪಡಿಸಿದಾಗ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವೇಳೆ ಆಸ್ಪತ್ರೆಯಲ್ಲಿ ರಾಮ್ ರಹೀಂ ತಾನು ಮಗಳೆಂದು ಕರೆಯುವ ಹನಿಪ್ರೀತ್ ರನ್ನು ಭೇಟಿಯಾಗಬೇಕೆಂದು ಒತ್ತಾಯಿಸಿದ್ದು, ಈ ವಿಷಯ ತಿಳಿದ ಹನಿಪ್ರೀತ್ ಅವರು ರಾಮ್ ರಹೀಂ ಇದ್ದ ಆಸ್ಪತ್ರೆಗೆ ಬಂದಿದ್ದಾರೆ.
ಹನಿಪ್ರೀತ್ ಅವರು ಜೂನ್ 15 ರವರೆಗೆ ರಾಮ್ ರಹೀಮ್ ಅವರ ಅಟೆಂಡೆಂಟ್ ಆಗಿ ಆಸ್ಪತ್ರೆಯಲ್ಲಿ ಇರಲಿದ್ದಾರೆ ಎಂದು ತಿಳಿದುಬಂದಿದೆ. ಹನಿಪ್ರೀತ್ ಸೋಮವಾರ ಬೆಳಗ್ಗೆಯಿಂದ ರಾಮ್ ರಹೀಂ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ರಾಮ್ ರಹೀಂ ಚೇತರಿಸಿಕೊಳ್ಳುವವರೆಗೂ ಅವರಿರುವ ವಾರ್ಡ್ನಲ್ಲಿಯೇ ಇದ್ದು ಅವರನ್ನು ಹನಿಪ್ರೀತ್ ನೋಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.