ಜೈಪುರ್(ರಾಜಸ್ಥಾನ):ಪಾಕಿಸ್ತಾನದ ಮಹಿಳಾ ಏಜೆಂಟ್ ಜೊತೆ ಹನಿಟ್ರ್ಯಾಪ್ನಲ್ಲಿ ಸಿಲುಕಿಕೊಂಡು ಭಾರತೀಯ ಸೇನೆಯ ಗೌಪ್ಯ ಮಾಹಿತಿ ಮತ್ತು ಕಾರ್ಯತಂತ್ರದ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಯೋಧನೋರ್ವನ ಬಂಧನ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಗುಪ್ತಚರ ವಿಭಾಗದ ಡಿಜಿ ಉಮೇಶ್ ಮಿಶ್ರಾ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತೀಯ ಯೋಧ ಪ್ರದೀಪ್ ಕುಮಾರ್ ಪಾಕಿಸ್ತಾನ ಗುಪ್ತಚರ ಇಲಾಖೆಯ ಮಹಿಳಾ ಏಜೆಂಟ್ ಜೊತೆ ಸಂಪರ್ಕದಲ್ಲಿದ್ದರು. ಕಳೆದ ಕೆಲ ದಿನಗಳಿಂದ ಅವರ ಮೇಲೆ ತೀವ್ರ ನಿಗಾ ವಹಿಸಿ, ಇದೀಗ ಬಂಧನಕ್ಕೊಳಪಡಿಸಲಾಗಿದೆ.
ಮಹಿಳಾ ಏಜೆಂಟ್ ಜೊತೆ ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್ ಮೂಲಕ ಸಂಪರ್ಕ ಸಾಧಿಸಿರುವ ಯೋಧ, ಗೌಪ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಯೋಧನನ್ನ ಹೆಚ್ಚಿನ ವಿಚಾರಣೆಗೋಸ್ಕರ ಮೇ. 18ರಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಈತ ಮೂಲತ ಉತ್ತರಾಖಂಡದವರು ಎನ್ನಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಸೇನೆಗೆ ಸೇರ್ಪಡೆಯಾಗಿದ್ದರು. ಕಳೆದ ಆರು ತಿಂಗಳ ಹಿಂದೆ ಯೋಧನ ಮೊಬೈಲ್ಗೆ ಕರೆ ಮಾಡಿರುವ ಮಹಿಳೆ ತಾನು ಬೆಂಗಳೂರಿನ ಮಿಲಿಟರಿ ನರ್ಸಿಂಗ್ ಸೇವಾ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದಾಳೆ.