ಜೈಪುರ(ರಾಜಸ್ಥಾನ): ಪಾಕಿಸ್ತಾನ ಮಹಿಳಾ ಎಜೆಂಟರ್ ಹನಿಟ್ರ್ಯಾಪ್ ಬಲೆಗೆ ಬಿದ್ದು, ಸೇನೆಯ ಗೌಪ್ಯ ಮಾಹಿತಿ ರವಾನೆ ಮಾಡಿರುವ ಆರೋಪದ ಮೇಲೆ ಯೋಧನೋರ್ವನ ಬಂಧನ ಮಾಡಲಾಗಿದೆ. ರಾಜಸ್ಥಾನ ಗುಪ್ತಚರ ಇಲಾಖೆ ಈ ಕಾರ್ಯಾಚರಣೆ ನಡೆಸಿದ್ದು, ಭಾರತೀಯ ಸೇನೆಯಲ್ಲಿ ಕೆಲಸ ಮಾಡ್ತಿದ್ದ ಯೋಧನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆಪರೇಷನ್ ಸರ್ಹಾದ್ ಅಡಿ ಈ ಮಹತ್ವದ ಕಾರ್ಯಾಚರಣೆ ನಡೆಸಲಾಗಿದ್ದು, ಯೋಧನೊಬ್ಬ ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ರಹಸ್ಯ ದಾಖಲೆ ಹಾಗೂ ವಿವಿಧ ವಿಡಿಯೋ ರವಾನೆ ಮಾಡಿದ್ದಾನೆ. ಬಂಧಿತ ಯೋಧನನ್ನ ಶಾಂತಿಮೊಯ್ ರಾಣಾ ಎಂದು ಗುರುತಿಸಲಾಗಿದೆ.
ಭಾರತೀಯ ಯೋಧನನ್ನ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಇಬ್ಬರು ಮಹಿಳಾ ಏಜೆಂಟ್ ಹನಿಟ್ರ್ಯಾಪ್ನಲ್ಲಿ ಸಿಲುಕಿಸಿದ್ದಾರೆ. ಇದಾದ ಬಳಿಕ ಹಣದ ಆಮಿಷವೊಡ್ಡಿದ್ದು, ಸೇನೆಯ ಮಹತ್ವದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಗುಪ್ತಚರ ಇಲಾಖೆ ಡಿಜಿ ಉಮೇಶ್ ಮಿಶ್ರಾ ತಿಳಿಸಿದ್ದಾರೆ. ಬಂಧಿತ ಯೋಧ ಪಾಕಿಸ್ತಾನ ಗುಪ್ತಚರ ಇಲಾಖೆ ಮಹಿಳಾ ಏಜೆಂಟ್ಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ತಮ್ಮ ಕಾರ್ಯತಂತ್ರದ ಮಾಹಿತಿ ಹಂಚಿಕೊಳ್ಳುತ್ತಿದ್ದನು. ಇದರ ಮೇಲೆ ಗುಪ್ತಚರ ಇಲಾಖೆ ನಿಗಾ ಇಟ್ಟಿತ್ತು. ಜುಲೈ 25ರಂದು ಆತನ ಬಂಧನ ಮಾಡಲಾಗಿದೆ.