ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರವಾಗಿ ನಾಗರಿಕರ ಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯದಲ್ಲಿ ಎರಡು ಪ್ರತ್ಯೇಕ ಉನ್ನತ ಮಟ್ಟದ ಸಭೆಗಳು ನಡೆದಿವೆ. ಮೊದಲ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಮತ್ತು ಆರ್ ಎ ಡಬ್ಲ್ಯೂ ಮುಖ್ಯಸ್ಥ ಸಮಂತ್ ಗೋಯೆಲ್ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಅಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಸಭೆಯಲ್ಲಿ ಶಾ ಅವರು ದೋವಲ್ ಮತ್ತು ಗೋಯೆಲ್ ಅವರನ್ನು ಜೆ & ಕೆ ನಲ್ಲಿ ಶಾಂತಿ ನೆಲೆಸುವಂತೆ ಮಾಡುವ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಎರಡನೇ ಸಭೆಯಲ್ಲಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಭಯೋತ್ಪಾದಕರಿಂದ ನಡೆಯುತ್ತಿರುವ ಉದ್ದೇಶಿತ ನಾಗರಿಕರ ಹತ್ಯೆ ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಡಿಜಿ ಬಿಎಸ್‌ಎಫ್ ಪಂಕಜ್ ಸಿಂಗ್, ಸಿಆರ್‌ಪಿಎಫ್ ಮತ್ತು ಎನ್‌ಐಎ ಡಿಜಿ ಸಿಂಗ್ ಕುಲ್ದೀಪ್ ಸಿಂಗ್, ಕೇಂದ್ರ ಗೃಹ ಸಚಿವಾಲಯದ ಇತರ ಅಧಿಕಾರಿಗಳು ಮತ್ತು ಜೆ & ಕೆ ಯ ಗುಪ್ತಚರ ಸಂಸ್ಥೆಗಳು ಭಾಗವಹಿಸಿದ್ದವು.