ನವದೆಹಲಿ:ಭಾರೀ ವಿರೋಧ ಮತ್ತು ಸವಾಲಿನ ನಡುವೆಯೂ ದೆಹಲಿಯ ಉನ್ನತಾಧಿಕಾರಿಗಳ ನೇಮಕ, ವರ್ಗಾವಣೆ ಮತ್ತು ಕೆಲವು ವಿಶೇಷ ಅಧಿಕಾರಗಳನ್ನು ನೀಡುವ ಸುಗ್ರೀವಾಜ್ಞೆಯನ್ನು(ದೆಹಲಿ ಪ್ರದೇಶದ ಸರ್ಕಾರ ಮಸೂದೆ-2023(ತಿದ್ದುಪಡಿ) ಕೇಂದ್ರ ಸರ್ಕಾರ ಸಂಸತ್ತಿನ ಉಭಯ ಸದನಗಳಲ್ಲಿ ಧ್ವನಿಮತದ ಮೂಲಕ ಅಂಗೀಕಾರ ಪಡೆದಿದೆ. ಮಸೂದೆ ಕಾಯ್ದೆಯಾಗಿ ಜಾರಿಗೆ ಬರಲು ರಾಷ್ಟ್ರಪತಿ ಅಂಕಿತವೊಂದೇ ಬಾಕಿ ಉಳಿದಿದೆ. ಈ ಮೂಲಕ ವಿಪಕ್ಷಗಳ 'ಇಂಡಿಯಾ' ಒಕ್ಕೂಟ ಹಾಕಿದ್ದ ಸವಾಲನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಿದೆ ದಾಟಿದೆ.
ಕೆಲ ದಿನಗಳ ಹಿಂದಷ್ಟೇ ಲೋಕಸಭೆಯಲ್ಲಿ ಸುಗ್ರೀವಾಜ್ಞೆಗೆ ಅಂಗೀಕಾರ ಪಡೆದುಕೊಂಡಿದ್ದ ಸರ್ಕಾರ, ನಿನ್ನೆ ಅದನ್ನು ರಾಜ್ಯಸಭೆಯಲ್ಲಿ ಮಂಡಿಸಿತು. ರಾಜ್ಯಸಭೆಯಲ್ಲಿ ಎನ್ಡಿಎ ಕೂಟಕ್ಕೆ ಪೂರ್ಣ ಬಹುಮತ ಇಲ್ಲವಾದ ಕಾರಣ ವಿಧೇಯಕವನ್ನು ಬಲವಾಗಿ ವಿರೋಧಿಸಿ ಸೋಲಾಗುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸರ್ವಪ್ರಯತ್ನ ನಡೆಸಿದಾಗ್ಯೂ ಪೂರ್ಣ ಬಹುಮತದೊಂದಿಗೆ ವಿಧೇಯಕ ಅಂಗೀಕಾರವಾಗಿದೆ. ಮಸೂದೆಯ ಪರವಾಗಿ 131 ಸಂಸದರು ಬೆಂಬಲ ನೀಡಿದರೆ, 102 ಇಂಡಿಯಾ ಒಕ್ಕೂಟದ ಸದಸ್ಯರು ಮತ ಹಾಕಿದರು.
ಕೈ ಹಿಡಿದ ವೈಎಸ್ಸಾರ್, ಬಿಜೆಡಿ:ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಕೂಟಕ್ಕೆ ಪೂರ್ಣ ಬಹುಮತ ಇಲ್ಲ. ಹೀಗಾಗಿ ಲೋಕಸಭೆಯಲ್ಲಿ ಪಾಸಾದ ಸುಗ್ರೀವಾಜ್ಞೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವುದು ಬಹು ಸವಾಲಿನದ್ದಾಗಿತ್ತು. ಮೋದಿ ವಿರೋಧಿ ಪಕ್ಷಗಳು ಕಟ್ಟಿಕೊಂಡಿರುವ ಇಂಡಿಯಾ ಒಕ್ಕೂಟ ವಿಧೇಯಕದ ವಿರುದ್ಧ ಮತ ಹಾಕುವುದಾಗಿ ಘೋಷಿಸಿದ್ದವು. ಆದರೆ, ಕೊನೆಗೆ ಬಿಜೆಡಿ ಮತ್ತು ವೈಎಸ್ಸಾರ್ ಕಾಂಗ್ರೆಸ್ನ ತಲಾ 9 ಸದಸ್ಯರು ವಿಧೇಯಕದ ಪರ ಮತ ನೀಡಿದ್ದರಿಂದ ಮಸೂದೆ ಸಲೀಸಾಗಿ ಪಾಸ್ ಆಯಿತು.
ಕೇಜ್ರಿವಾಲ್ಗೆ ಮುಖಭಂಗ:ಸುಗ್ರೀವಾಜ್ಞೆಯನ್ನು ಶತಾಯಗತಾಯ ಸೋಲಿಸಬೇಕೆಂಬ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪ್ರಯತ್ನಕ್ಕೆ ತೀವ್ರ ಹಿನ್ನಡೆ ಉಂಟಾಯಿತು. ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷವಾಗಿರುವ ಆಪ್ ಉಳಿದ ಪಕ್ಷಗಳೂ ದೆಹಲಿ ಸುಗ್ರೀವಾಜ್ಞೆಯನ್ನು ವಿರೋಧಿಸುವಂತೆ ಒತ್ತಡ ತಂದಿದ್ದರು. ಮೊದಲು ಕಾಂಗ್ರೆಸ್ ಇದನ್ನು ಒಪ್ಪಿಕೊಂಡಿಲ್ಲವಾದರೂ ಬಳಿಕ ಆಪ್ ಒತ್ತಡಕ್ಕೆ ಮಣಿದು ವಿಧೇಯಕವನ್ನು ವಿರೋಧಿಸಿತ್ತು. ಆದರೆ, ಬಹುಮತದ ಕೊರತೆ ನಡುವೆಯೂ ಮಸೂದೆ ಅಂಗೀಕಾರವಾಗಿದ್ದು ಕೇಜ್ರಿವಾಲ್ಗೆ ಮುಖಭಂಗ ತಂದಿದೆ.
ಜನರ ಹಕ್ಕುಗಳ ರಕ್ಷಣೆಗೆ ಮಸೂದೆ:ಇದಕ್ಕೂ ಮೊದಲು ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜನರ ಹಕ್ಕುಗಳನ್ನು ಕಾಪಾಡಲು ಮಸೂದೆಯನ್ನು ತರಲಾಗಿದೆಯೇ ಹೊರತು ಎಎಪಿ ಸರ್ಕಾರದ ಅಧಿಕಾರವನ್ನು ಕಸಿದುಕೊಳ್ಳಲು ಅಲ್ಲ ಎಂದು ಹೇಳಿದರು.