ಹೈದರಾಬಾದ್ (ತೆಲಂಗಾಣ): ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಹೆಚ್‌ಐಸಿಸಿ ಸಭಾಂಗಣದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಎರಡನೇ ದಿನ ಹಲವು ನಿರ್ಣಯಗಳನ್ನು ಮಂಡಿಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಕೀಯ ನಿರ್ಣಯಗಳನ್ನು ಮಂಡಿಸಿದರು.
ಮುಂಬರುವ ದಿನಗಳಲ್ಲಿ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಪುದುಚೇರಿಯಲ್ಲಿ ನಡೆಯಲಿರುವ ಚುನಾವಣೆಗಳು ಮತ್ತು ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆಯೂ ನಿರ್ಣಯಗಳನ್ನು ಮಂಡಿಸಲಾಯಿತು. ತೆಲಂಗಾಣದ ಮೇಲೆ ವಿಶೇಷವಾಗಿ ಕಣ್ಣಿಟ್ಟಿರುವ ಬಿಜೆಪಿ, ಈ ರಾಜ್ಯದ ಬಗ್ಗೆ ಅಮಿತ್ ಶಾ ಮತ್ತು ಹಿರಿಯ ನಾಯಕರು ಪ್ರಮುಖ ಘೋಷಣೆಗಳನ್ನು ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಸಂಸದರೇ ಕೇತ್ರಗಳಿಗೆ ಹೋಗಿ: ದೇಶಾದ್ಯಂತ ಇರುವ ಬಿಜೆಪಿ ಸಂಸದರು ತಮ್ಮ-ತಮ್ಮ ಕ್ಷೇತ್ರಗಳಿಗೆ ಹೋಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ಸಲಹೆ ನೀಡಿದ್ದಾರೆ. ಈ ಕಾರ್ಯಕಾರಿಣಿ ನಂತರ ಸಂಸದರು ಮೂರು ದಿನಗಳ ಕಾಲ ತಮ್ಮ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸಲು ಶ್ರಮಿಸುವಂತೆ ಸೂಚಿಸಲಾಗಿದೆ. ಅದರಲ್ಲೂ ಪ್ರಮುಖವಾಗಿ 200 ಸಂಸದೀಯ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಈ ಕ್ಷೇತ್ರಗಳ ಹೊಣೆಯನ್ನು ಕೇಂದ್ರ ಸಚಿವರಿಗೆ ವಹಿಸಲಾಗಿದೆ.
ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ: ಮುಂದಿನ ರಾಜಕೀಯ ನಿರ್ಣಯಗಳನ್ನು ಮಂಡಿಸಿದ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನಕಾರಾತ್ಮಕ ರಾಜಕಾರಣದಲ್ಲಿ ತೊಡಗಿದೆ. ಅಲ್ಲದೇ, ಅವಕಾಶವಾದಿ ಮತ್ತು ಭ್ರಷ್ಟ ರಾಜಕಾರಣಕ್ಕೆ ಕಾಂಗ್ರೆಸ್ ವೇದಿಕೆಯಾಗಿದೆ ಎಂದು ಟೀಕಿಸಿದರು. ಇದೇ ವೇಳೆ ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಅಯೋಧ್ಯೆಯ ದೇವಾಲಯದಲ್ಲಿ ಮಲಗಿದ್ದವನ ಕತ್ತು ಸೀಳಿ ಕೊಂದ ಕಿರಾತಕರು