ಶಾಮ್ಲಿ (ಉತ್ತರಪ್ರದೇಶ):ಪೊಲೀಸ್ ಇಲಾಖೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವ ಗೃಹ ರಕ್ಷಕ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಇದೀಗ ಶಾಮ್ಲಿ ಜಿಲ್ಲೆಯಲ್ಲೂ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಜಿಲ್ಲಾ ಕೇಂದ್ರದಲ್ಲಿರುವ ಮಹಿಳಾ ಪೊಲೀಸ್ ಠಾಣೆಗೆ (ಶಾಮ್ಲಿ ಮಹಿಳಾ ಠಾಣೆ) ನಿಯೋಜನೆಗೊಂಡಿರುವ ಗೃಹ ರಕ್ಷಕರು, ಠಾಣಾಧಿಕಾರಿಯ ಕೆಲ ನಿರ್ಧಾರದಿಂದ ಸಮಸ್ಯೆಗೆ ಒಳಗಾಗಿದ್ದಾರೆ. ಅಲ್ಲದೇ ಇಲ್ಲಿ ನಿಯೋಜಿಸಲಾದ ಗೃಹರಕ್ಷಕರನ್ನು ರಾತ್ರಿ 8 ಗಂಟೆಯ ನಂತರ ಠಾಣೆ ಒಳಗೆ ಬಿಡುವುದಿಲ್ಲವಂತೆ.
ರಾತ್ರಿ 8 ಗಂಟೆಯ ನಂತರ ಯಾವುದೇ ವ್ಯಕ್ತಿ ಒಳಗೆ ಹೋಗಬಾರದು ಎಂದು ಎಸ್‌ಎಚ್‌ಒ ಆದೇಶಿಸಿದ್ದಾರೆ. ಆದ್ದರಿಂದ ಪೊಲೀಸ್ ಠಾಣೆಯ ಗೇಟ್ನನ್ನು ರಾತ್ರಿ ಮುಚ್ಚಲಾಗುತ್ತದೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳಿಯಲ್ಲಿ ನಿಯೋಜನೆಗೊಂಡ ಗೃಹ ರಕ್ಷಕ ಧರ್ಮೇಂದ್ರ ಕುಮಾರ್ ಹೇಳುತ್ತಾರೆ. ಭದ್ರತೆಯಲ್ಲಿ ನಿಯೋಜಿಸಲಾಗಿದ್ದರೂ ಸಹ ಒಳಗೆ ಹೋಗಲು ಅವಕಾಶವಿಲ್ಲ ಎಂದು ಗೃಹ ರಕ್ಷಕರು ಹೇಳಿದರು. ಪೊಲೀಸ್ ಠಾಣೆಯ ಹೊರಗೆ ಸುರಕ್ಷಿತ ಛಾವಣಿಯ ಕೆಳಗೆ ಕುಳಿತುಕೊಳ್ಳಲು ವ್ಯವಸ್ಥೆಯನ್ನೂ ಸಹ ಮಾಡಿಲ್ಲ.
ಮಹಿಳಾ ಪೊಲೀಸ್ ಠಾಣೆಯಲ್ಲಿ ರಾತ್ರಿ ಕರ್ತವ್ಯಕ್ಕೆ ನಿಯೋಜನೆಗೊಂಡ ಇನ್ನೊಬ್ಬ ಗೃಹ ರಕ್ಷಕ ಸುಭಾಷ್ ಮಲಿಕ್ ಮಾತನಾಡಿ, ಯಾವುದೇ ಸೌಲಭ್ಯಗಳಿಲ್ಲದೇ ರಾತ್ರಿಯಲ್ಲಿ ಠಾಣೆಯ ಹೊರಗೆ ಇರುತ್ತೇವೆ. ಈ ಕುರಿತು ಎಲ್ಲ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ. ಆದರೆ, ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ.