ಹೈದರಾಬಾದ್ (ತೆಲಂಗಾಣ): ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜನವರಿ 30ರ ವರೆಗೆ ರಜೆಯನ್ನು ವಿಸ್ತರಿಸುವ ನಿರ್ಧಾರವನ್ನು ತೆಲಂಗಾಣ ಸರ್ಕಾರ ಇಂದು ಪ್ರಕಟಿಸಿದೆ. ತೆಲಂಗಾಣ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ರಜೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ, ಸರ್ಕಾರವು ಜನವರಿ 8 ರಿಂದ 16ರ ವರೆಗೆ ಮಾತ್ರ ಸಂಕ್ರಾಂತಿ ರಜೆಯನ್ನು ಘೋಷಿಸಿತ್ತು. ಹಿಂದಿನ ಪ್ರಕಟಣೆಯ ಪ್ರಕಾರ, ರಜಾದಿನಗಳು ಇಂದೇ ಪೂರ್ಣಗೊಳ್ಳಬೇಕಿತ್ತು. ಆದರೆ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ರಾಜ್ಯ ಸರ್ಕಾರ ರಜೆಯನ್ನು ವಿಸ್ತರಿಸಿದೆ ಎಂದು ಸೋಮೇಶ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ತೀವ್ರತೆ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಸೋಮವಾರ ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಆನ್‌ಲೈನ್ ತರಗತಿಗಳನ್ನು ನಡೆಸುವುದರ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ 27 ಜನ ಪೊಲೀಸರಿಗೆ ಕೊರೊನಾ ಸೋಂಕು
ಶನಿವಾರ ತೆಲಂಗಾಣದಲ್ಲಿ 1,963 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 7,07,162ಕ್ಕೆ ಏರಿಕೆಯಾಗಿದೆ. ಈ ಪೈಕಿ 6,81,091 ಮಂದಿ ಚೇತರಿಸಿಕೊಂಡಿದ್ದು, 4,054 ಮಂದಿ ಮೃತಪಟ್ಟಿದ್ದಾರೆ. ಒಟ್ಟು 22,017 ಕೇಸ್ಗಳು ಸಕ್ರಿಯವಾಗಿವೆ.