ನವದೆಹಲಿ:ಇಂದು ದೇಶಾದ್ಯಂತ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲಡೆ ಒಬ್ಬರಿಗೊಬ್ಬರು ವಿವಿಧ ಬಣ್ಣಗಳನ್ನು ಎರಚಿಕೊಳ್ಳುತ್ತ ಉತ್ಸಾಹದ ಬುಗ್ಗೆಯಂತೆ ಹಿಗ್ಗಿ ನಲಿಯುತ್ತಿದ್ದಾರೆ.
ಮುಂಜಾನೆಯಿಂದಲೇ ಹಬ್ಬದ ಸಂಭ್ರಮ ಮನೆ ಮಾಡಿದೆ. ಯಾವುದೇ ವಯಸ್ಸಿನ ಅಂತರವಿಲ್ಲದೆ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಬಣ್ಣಗಳನ್ನು ಪರಸ್ಪರರಿಗೆ ಹಚ್ಚಿ ಸಂಭ್ರಮಿಸುತ್ತಿದ್ದಾರೆ. ಪಶ್ಚಿಮಬಂಗಾಳ, ಮಧ್ಯಪ್ರದೇಶ, ಕೋಲ್ಕತ್ತಾ, ಗುಜರಾತ್ ಸೇರಿದಂತೆ ಎಲ್ಲೆಡೆ ಹಬ್ಬದ ಕಳೆಗಟ್ಟಿದೆ.
ಹೋಳಿ ಹಬ್ಬದ ನಿಮಿತ್ತ ಮುಂಜಾನೆಯಿಂದಲೇ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಆಚರಣೆಗಳು ನಡೆಯುತ್ತಿವೆ. ಇತ್ತ ಪಶ್ಚಿಮ ಬಂಗಾಳದ ಲೈಂಗಿಕ ಕಾರ್ಯಕರ್ತರ ಅತಿದೊಡ್ಡ ಸಂಘಟನೆಯಾದ ದರ್ಬಾರ್ ಮಹಿಳಾ ಸಮನ್ವಯ ಸಮಿತಿಯು ಕೋಲ್ಕತ್ತಾದ ಸೋನಾಗಾಚಿಯಲ್ಲಿರುವ ರೆಡ್-ಲೈಟ್ ಪ್ರದೇಶದಲ್ಲಿ ಹೋಳಿ ಆಚರಿಸಿತು.