ಬೆಂಗಳೂರು:ನಗರದ ರಸ್ತೆ ಬದಿಗಳಲ್ಲಿ ಮತ್ತು ಸಿಗ್ನಲ್‌ಗಳಲ್ಲಿ ಪೆನ್ ಸೇರಿದಂತೆ ಇತರ ವಸ್ತುಗಳನ್ನು ಮಾರಾಟ ಮಾಡುವ ಮಕ್ಕಳಿಗೆ ಪುರ್ನವಸತಿ ಕಲ್ಪಿಸುವುದು ಮತ್ತು ಶಿಕ್ಷಣ ನೀಡುವುದಕ್ಕಾಗಿ ಅಗತ್ಯ ಸಲಹೆಗಳನ್ನು ನೀಡಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ(ಕೆಎಸ್‌ಎಲ್‌ಎಸ್‌ಎ) ಸದಸ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಮಕ್ಕಳ ರಕ್ಷಣೆಗೆ ಶ್ರಮಿಸುತ್ತಿರುವ ಸಂಸ್ಥೆಗಳ ಪಾಲುದಾರರು ನ.15ರಂದು ಸಭೆ ನಡೆಸಲು ಹೈಕೋರ್ಟ್ ಸೂಚನೆ ನೀಡಿದೆ.
ವಿಚಾರಣೆ ಮುಂದೂಡಿದ ಕೋರ್ಟ್:ಬೆಂಗಳೂರು ನಗರದ ಲೆಟ್ಜ್ಕಿಟ್ ಫೌಂಡೇಷನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಲೆ ಅವರಿದ್ದ ವಿಭಾಗೀಯ ಪೀಠ, ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ. 2021ರ ಫೆ.18ರಂದು ನ್ಯಾಯಪೀಠದ ಸೂಚನೆ ಮೇರೆಗೆ ಎಲ್ಲ ಪಾಲುದಾರರು ಸಭೆ ನಡೆಸಿ ಸಲಹೆಗಳನ್ನು ನೀಡಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಸರ್ಕಾರ ಅನುಪಾಲನಾ ವರದಿ ಸಲ್ಲಿಸಿದೆ.
ಈ ವರದಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಬೇಕಾಗಿದೆ. ಆದ್ದರಿಂದ ಮತ್ತೊಮ್ಮೆ ಸಭೆ ನಡೆಸಬೇಕು. ಈ ನಿಟ್ಟಿನಲ್ಲಿ ನ. 15ರ ಸಂಜೆ 5.30ಕ್ಕೆ ಸಭೆ ನಡೆಸುವಂತೆ ಕೋರ್ಟ್ ಸೂಚನೆ ನೀಡಿದೆ. ಈ ಹಿಂದೆ ಭಾಗಿಯಾಗಿದ್ದ ಎಲ್ಲ ಪಾಲುದಾರರು ಸಭೆಗೆ ತಪ್ಪದೆ ಹಾಜರಾಗಬೇಕು. ರಾಜ್ಯ ಸರ್ಕಾರ ಅನುಪಾಲನಾ ವರದಿಗೆ ಸಂಬಂಧಿಸಿದಂತೆ ಎಲ್ಲಾ ವರದಿಗಳ ಹೆಚ್ಚಿನ ಪ್ರತಿಗಳನ್ನು ಒದಗಿಸಬೇಕು. ಪಾಲುದಾರರಿಗೆ ಅನುಪಾಲನಾ ವರದಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು.
ಹೈಕೋರ್ಟ್ ಸಭಾಂಗಣದಲ್ಲಿ ಸಭೆಗೆ ವ್ಯವಸ್ಥೆ:ಇದಕ್ಕಾಗಿ ರಿಜಿಸ್ಟ್ರಾರ್ ಅವರು ಹೈಕೋರ್ಟ್ ಸಭಾಂಗಣದಲ್ಲಿ ಸಭೆ ನಡೆಸಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಇದರೊಂದಿಗೆ ಮಕ್ಕಳ ರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುವುದಕ್ಕಾಗಿ ಈಗಾಗಲೇ ಮೆಟ್ರೋ ರೈಲಿನಲ್ಲಿ 1098 ಸಹಾಯವಾಣಿ ಸಂಖ್ಯೆಯುಳ್ಳ ಸ್ಕ್ರೋಲಿಂಗ್ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ.