ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ದೆಹಲಿಗೆ ತೆರಳುವ ಗೋಫಸ್ಟ್ ಏರ್ಲೈನ್ಸ್ನಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿ ವ್ಯಕ್ತಿಯೋರ್ವನಿಂದ ಬಂದ ಕರೆಯಿಂದಾಗಿ ಸೋಮವಾರ ಸಂಜೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ (ಎಸ್‌ಎಕ್ಸ್‌ಆರ್) ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ನವದೆಹಲಿ ಮೂಲದ ಸಂಖ್ಯೆಯೊಂದರಿಂದ ಸಂಜೆ 7 ಗಂಟೆಗೆ ಟೇಕ್ ಆಫ್ ಆಗಬೇಕಿದ್ದ ವಿಮಾನದೊಳಗೆ ಬಾಂಬ್ ಇಡಲಾಗಿದೆ ಎಂದು ಕರೆಯಲ್ಲಿ ಸುಳ್ಳು ಹೇಳಲಾಗಿತ್ತು. ನಾವು ಅದನ್ನು ಅನುಸರಿಸಿ ವಿಮಾನಯಾನ ಸಂಸ್ಥೆ ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡಿದ್ದೆವು ಎಂದು ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ತಿಳಿಸಿದ್ದಾರೆ.
ಹುಸಿ ಕರೆಯನ್ನು ನಂಬಿ ವಿಮಾನ ಟೇಕ್ ಆಫ್ ಆಗುವುದನ್ನೂ ತಡೆಹಿಡಿದು ಬಾಂಬ್ಗಾಗಿ ಸಂಪೂರ್ಣ ಹುಡುಕಾಟ ನಡೆಸಿದ್ದೇವೆ. ಆದರೆ ಆ ಥರ ಏನೂ ಕಂಡುಬಂದಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಗೋ ಫಸ್ಟ್ ಏರ್ಲೈನ್ಸ್ನ ಹಿರಿಯ ಅಧಿಕಾರಿಯೊಬ್ಬರು 'ಈಟಿವಿ ಭಾರತ'ಕ್ಕೆ ಘಟನೆಯ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದು, 'G8 - 149 (A320-271 N) ಸೋಮವಾರ ಸಂಜೆ 7 ಗಂಟೆಗೆ ಶ್ರೀನಗರದಿಂದ ದೆಹಲಿಗೆ ಹೊರಡಲು ಸಿದ್ಧವಾಗಿತ್ತು. ಆದರೆ ಹುಸಿ ಕರೆಯಿಂದಾಗಿ ಅದು ವಿಳಂಬವಾಗಿದೆ. ಕರೆ ಬಂದ ಕೂಡಲೇ ಭದ್ರತಾ ಪಡೆಗೆ ಎಚ್ಚರಿಕೆ ನೀಡಿಲಾಗಿದೆ. ಅವರು ಎರಡು ಗಂಟೆಗಳ ಕಾಲ ಎಲ್ಲಾ ರೀತಿಯಲ್ಲೂ ಹುಡುಕಾಟ ನಡೆಸಿದ್ದಾರೆ ಎಂದರು.