ನವದೆಹಲಿ:ದೆಹಲಿಯ ಫಿರೋಜ್ ಶಾ ರಸ್ತೆಯಲ್ಲಿ ಮಂಗಳವಾರ ಮತ್ತೊಂದು ಹಿಟ್ ಅಂಡ್ ಡ್ರ್ಯಾಗ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ವೇಗವಾಗಿ ಬಂದ ಕಾರೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಚಾಲಕ ಕಾರಿಗೆ ಸಿಲುಕಿದ್ದು, ಸುಮಾರು 200 ಮೀಟರ್ ವರೆಗೆ ರಿಕ್ಷಾಚಾಲಕನನ್ನು ಕಾರು ಎಳೆದೊಯ್ದಿರುವ ಘಟನೆ ನಡೆದಿದೆ. ಘಟನೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಅಪಘಾತದ ಮಾಹಿತಿ ಪಡೆದು ಕಾರು ಚಾಲಕ ಫರ್ಮಾನ್ನನ್ನ ಬಂಧಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ರಿಕ್ಷಾ ಚಾಲಕ ಮನೋಜ್ನನ್ನು ಕೂಡಲೇ ಸ್ಥಳೀಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು ಉಪ ಪೊಲೀಸ್ ಆಯುಕ್ತ ಪ್ರಣವ್ ತಯಾಲ್ ಮಾಹಿತಿ ನೀಡಿದ್ದು, "ಮಂಗಳವಾರ ತಡರಾತ್ರಿ ಫಿರೋಜ್ ಶಾ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ರಿಕ್ಷಾ ಚಾಲಕ ಕಾರಿನ ಬ್ಯಾನೆಟ್‌ಗೆ ಸಿಲುಕಿದ್ದು, ಕಾರು ಚಾಲಕ ಸುಮಾರು 200 ಮೀಟರ್ ದೂರ ಎಳೆದೊಯ್ದಿದ್ದಾನೆ. ಇದನ್ನು ಕಂಡ ಜನರು ಕಾರನ್ನು ತಡೆದಿದ್ದಾರೆ. ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕಾರು ಚಾಲಕ ಗಾಜಿಯಾಬಾದ್ನ ಮುರಾದ್ ನಗರದ ನಿವಾಸಿ ಫರ್ಮಾನ್ ನನ್ನು ಬಂಧಿಸಲಾಗಿದ್ದು, ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಅಪಘಾತ ಮಾಡಲಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹಾಗೆಯೇ ಆರೋಪಿತನನ್ನು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಘಟನೆಯಲ್ಲಿ ಗಾಯಗೊಂಡಿರುವ ಮನೋಜ್ ಹೌಸ್ ಕೀಪಿಂಗ್ ಕೆಲಸದ ಜೊತೆ ರಿಕ್ಷಾ ಓಡಿಸುತ್ತಿದ್ದರು. ಆಸ್ಪತ್ರೆಯಲ್ಲಿ ಮನೋಜ್ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.
"ಅಲ್ಲದೆ ಅಪಘಾತವಾದ ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಫರ್ಮಾನ್ ವಿರುದ್ಧ ನಿರ್ಲಕ್ಷ್ಯದ ವಾಹನ ಚಲಾವಣೆಯಡಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ತನಿಖೆ ನಡೆಸುತ್ತಿದ್ದು, ಸಮೀಪ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಇದರಿಂದ ಅಪಘಾತದ ಸಂಪೂರ್ಣ ಮಾಹಿತಿ ಸಿಗಲಿದೆ" ಎಂದು ಪ್ರಣವ್ ತಯಾಲ್ ತಿಳಿಸಿದ್ದಾರೆ.