ದಶಕದ ಮೊದಲ ಮತ್ತು ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ನಡೆಯುತ್ತಿರುವ 2ನೇ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ (ತಮಿಳುನಾಡು) ಮತ್ತು ತೃಣಮೂಲ ಕಾಂಗ್ರೆಸ್ ( ಪಶ್ಚಿಮ ಬಂಗಾಳ ) ಸತತ ಮೂರನೇ ಬಾರಿಗೆ ಕಣಕ್ಕೆ ಇಳಿದಿದ್ದವು. ಎಡಪಂಥೀಯರು ಕೇರಳವನ್ನು ಉಳಿಸಿಕೊಳ್ಳಲು ಬಯಸಿದ್ದರೆ ಬಿಜೆಪಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಎರಡನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸಿತ್ತು. ಒಟ್ಟು ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 824 ವಿಧಾನಸಭಾ ಕ್ಷೇತ್ರಗಳಲ್ಲಿ ಹಣಾಹಣಿ ಏರ್ಪಾಡಾಗಿತ್ತು .
2016 ರಲ್ಲಿ ನಡೆದ ಚುನಾವಣೆ ವೇಳೆ 824 ಸ್ಥಾನಗಳಲ್ಲಿ ಬಿಜೆಪಿ ಕೇವಲ 64 ಸ್ಥಾನಗಳನ್ನು ಗೆದ್ದಿತ್ತು. ದೇಶದ ಎಲ್ಲೆಡೆ ತನ್ನ ಪ್ರಭಾವ ವಿಸ್ತರಿಸುವ ಉದ್ದೇಶದೊಂದಿಗೆ ಇತ್ತೀಚೆಗಷ್ಟೇ ಮುಕ್ತಾಯ ಕಂಡ ಚುನಾವಣೆಯಲ್ಲಿ ಅದು ಅಖಾಡಕ್ಕೆ ಇಳಿದಿತ್ತು. ರಂಗಸ್ವಾಮಿ ಅವರ ಪಕ್ಷದೊಂದಿಗೆ ಪಾಂಡಿಚೇರಿಯಲ್ಲಿ ಅದೃಷ್ಟ ಪರೀಕ್ಷೆ ನಡೆಸಿತು. ಆದರೆ ಎಂದಿನಂತೆ ಚುನಾವಣಾ ಪಂಡಿತರು ಮತದಾರರ ನಾಡಿ ಮಿಡಿತವನ್ನು ಅರಿಯಲು ವಿಫಲರಾಗಿದ್ದಾರೆ.
ತಮ್ಮ ಮಗ ಎಂ. ಕೆ ಸ್ಟಾಲಿನ್ ಅವರ ಬೆನ್ನು ತಟ್ಟುತ್ತಾ ಎಂ. ಕೆ ಕರುಣಾನಿಧಿ 1975 ರಲ್ಲಿ ಒಂದು ಮಾತು ಹೇಳಿದ್ದರು, “ಇಂದಿರಾ ಗಾಂಧಿ ನಿನ್ನನ್ನು ದೊಡ್ಡ ನಾಯಕನನ್ನಾಗಿ ಮಾಡಲು ಬಯಸಿದ್ದಾರೆ. ಕಷ್ಟಗಳನ್ನು ಎದುರಿಸಲು ಆರಂಭಿಸು" ಎಂದು ಅದರಂತೆ ಸ್ಟಾಲಿನ್ ಹಲವಾರು ಕಷ್ಟಗಳನ್ನು ಎದುರಿಸಿದರು. ಆದರೆ, ತಮಿಳುನಾಡಿನಾದ್ಯಂತ ನಡೆದ ʼ ನಮಕ್ಕು ನಾಮೆ ʼ ಹೆಸರಿನ ಪಾದಯಾತ್ರೆ ಮೂಲಕ ಅವರು ಪಟ್ಟ ಶ್ರಮ ಈ ಚುನಾವಣೆಯಲ್ಲಿ ಫಲ ನೀಡಿದೆ. ಡಿ ಎಂ ಕೆ ಪರವಾಗಿ ಶೇ 37ರಷ್ಟು ಮತ ಚಲಾಯಿಸುವ ಮೂಲಕ ತಮಿಳು ಮತದಾರರು ತೀರ್ಪು ನೀಡಿದರು. ಇಷ್ಟಾದರೂ ಎಐಎಡಿಎಂಕೆ ಪಕ್ಷವನ್ನು ಅವರು ಸಂಪೂರ್ಣವಾಗಿ ಕಡೆಗಣಿಸಲಿಲ್ಲ. ಆ ಪಕ್ಷದ ಪರವಾಗಿ ಶೇ 33 ರಷ್ಟು ಮತ ಚಲಾಯಿಸುವ ಜೊತೆಗೆ 77 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಜಯ ತಂದುಕೊಟ್ಟಿದ್ದಾರೆ.
ಪಿಣರಾಯಿ ವಿಜಯನ್‌ಗೆ ಕೇರಳಿಗರು ಜೈ
ಕೋವಿಡ್ ಸಾಂಕ್ರಾಮಿಕದ ದುಷ್ಟ ಹಿಡಿತದಿಂದ ಕೇರಳದ ಜನರನ್ನು ರಕ್ಷಿಸಲು ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯೋಜಿತ ಮತ್ತು ಸಂಘಟನಾತ್ಮಕ ಬೆಂಬಲ ನೀಡಿದರು. ಕೇರಳದ ಜನತೆ ಈ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ನಿರ್ಣಾಯಕ ಜಯ ನೀಡಿತು. ಕಳೆದ ಚುನಾವಣೆ ವೇಳೆ ಕೇರಳದಲ್ಲಿ ಒಂದು ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಖಾತೆ ತೆರೆದಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಆ ಖಾತೆಯೂ ಮುಚ್ಚಿ ಹೋಯಿತು. ಕೇಸರಿ ಪಕ್ಷ ಒಂದು ಸ್ಥಾನವನ್ನು ಕೂಡ ಅಲ್ಲಿ ಗೆಲ್ಲಲು ಸಾಧ್ಯ ಆಗಲಿಲ್ಲ. ಈ ಬಗೆಯ ಅನೇಕ ಕಾರಣಗಳಿಗೆ ಕೇರಳದಲ್ಲಿ ದೊರೆತ ಜನತಾ ತೀರ್ಪು ವಿಶೇಷವಾಗಿ ಕಂಡು ಬರುತ್ತದೆ.
ಮತ್ತೆ ಮಮತಾಗೇ ಒಲಿದ ಬಂಗಾಳ.. ಮೋದಿ ಶಾಗೆ ಬರೀ ನಿರಾಸೆ
ಮಮತಾ ಬ್ಯಾನರ್ಜಿ ಅವರ ಸುದೀರ್ಘ ಹತ್ತು ವರ್ಷಗಳ ಆಡಳಿತವನ್ನು ಕಿತ್ತೊಗೆಯಲು ಬಿಜೆಪಿ ತನ್ನ ಎಲ್ಲಾ ಬಲ ಪ್ರಯೋಗಿಸಿದ ಕಾರಣಕ್ಕೆ ಪಶ್ಚಿಮ ಬಂಗಾಳದ ಚುನಾವಣಾ ಅಖಾಡ ರಾಷ್ಟ್ರದ ಗಮನ ಸೆಳೆಯಿತು. ಈ ಬಾರಿ ಚುನಾವಣೆ ನಡೆದ ಐದು ಪ್ರದೇಶಗಳಲ್ಲಿ ಪಶ್ಚಿಮ ಬಂಗಾಳ ಅತಿ ದೊಡ್ಡದಾಗಿತ್ತು . ವಿಧಾನ ಸಭೆ ಚುನಾವಣೆಯನ್ನು ರಾಜ್ಯದಲ್ಲಿ 8 ಹಂತಗಳಲ್ಲಿ ನಡೆಸುವ ನಿರ್ಧಾರ ಇರಲಿ ಅಥವಾ ಮತಗಟ್ಟೆ ಏಜೆಂಟರ ನೇಮಕಾತಿ ಮೇಲಿನ ನಿಯಮಗಳ ಸಡಿಲಿಕೆಯೇ ಇರಲಿ ಇಲ್ಲವೇ ಸಿ ಆರ್ ಪಿ ಎಫ್ ತುಕಡಿಯನ್ನು ಭಾರಿ ಗಾತ್ರದಲ್ಲಿ ನಿಯೋಜಿಸಿದ ಸಂಗತಿಯೇ ಇರಲಿ ಇಂತಹ ಅನೇಕ ಕಾರಣಗಳಿಗೆ ಟಿ ಎಂ ಸಿ ಚುನಾವಣಾ ಆಯೋಗದೊಂದಿಗೆ ಹೆಜ್ಜೆ ಹೆಜ್ಜೆಗೂ ಹೋರಾಡಬೇಕಾಯಿತು.