ನವದೆಹಲಿ: ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದ ಕಲಾಪಗಳನ್ನು ಮಂಗಳವಾರ ನೇರ ಪ್ರಸಾರ ಮಾಡಿದೆ. ಇದು ಮುಂದೆಯೂ ನಡೆಯಲಿದ್ದು, ಕಲಾಪದ ಪ್ರಕ್ರಿಯೆಗಳನ್ನು ಜನಸಾಮಾನ್ಯರು webcast.gov.in/scindia/ನಲ್ಲಿ ವೀಕ್ಷಿಸಬಹುದು.
2018ರ ಸೆಪ್ಟೆಂಬರ್ 27ರಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೀಡಿದ್ದ ಮಹತ್ವದ ತೀರ್ಪಿನಲ್ಲಿ ಸಾಂವಿಧಾನಿಕ ಪ್ರಾಮುಖ್ಯತೆಯ ವಿಷಯಗಳ ಕುರಿತ ಕಲಾಪದ ಪ್ರಕ್ರಿಯೆಗಳ ವೆಬ್‌ಕಾಸ್ಟ್ ಅಥವಾ ನೇರ ಪ್ರಸಾರಕ್ಕೆ ಹಸಿರು ಬಾವುಟ ನೀಡಿದ್ದರು. ಇದಾದ ನಾಲ್ಕು ವರ್ಷಗಳ ನಂತರ ಇಂದಿನಿಂದ ಸಂವಿಧಾನ ಪೀಠದ ಪ್ರಕ್ರಿಯೆಗಳ ಲೈವ್ ಸ್ಟ್ರೀಮಿಂಗ್ ನೀಡಲಾಗಿದೆ.
ನೇರ ಪ್ರಸಾರಕ್ಕೆ ಸ್ವಂತ ವ್ಯವಸ್ಥೆ ಶೀಘ್ರ: ಸೋಮವಾರ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್, ಇದುವರೆಗೆ ಯೂಟ್ಯೂಬ್‌ನಲ್ಲಿ ಪ್ರಸಾರವಾದ ಪ್ರಕ್ರಿಯೆಗಳನ್ನು ಲೈವ್ ಸ್ಟ್ರೀಮಿಂಗ್ ಮಾಡಲು ಸುಪ್ರೀಂಕೋರ್ಟ್ ಶೀಘ್ರದಲ್ಲೇ ತನ್ನದೇ ಆದ ವ್ಯವಸ್ಥೆ ಪರಿಚಯಿಸಲಿದೆ ಎಂದು ಹೇಳಿದ್ದರು. ಸಿಜೆಐ ನೇತೃತ್ವದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ತೆಗೆದುಕೊಂಡ ನಂತರ ಈ ಘೋಷಣೆ ಮಾಡಲಾಗಿತ್ತು.
ಸದ್ಯ ಯೂಟ್ಯೂಬ್ ಮೂಲಕ ಸುಪ್ರೀಂಕೋರ್ಟ್ ವಿಚಾರಣೆಗಳನ್ನು ನೇರ ಪ್ರಸಾರ ವೀಕ್ಷಿಸಬಹುದಾಗಿದೆ. ಸಾಮಾನ್ಯ ಜನರು ತಮ್ಮ ಸೆಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳಿಂದ ಯಾವುದೇ ತೊಂದರೆಯಿಲ್ಲದೇ ಪ್ರಕ್ರಿಯೆಗಳನ್ನು ನೋಡಬಹುದಾಗಿದೆ.
ಮೊದಲ ಬಾರಿಗೆ ಆಗಸ್ಟ್ 26ರಂದು ಸುಪ್ರೀಂಕೋರ್ಟ್ ವೆಬ್‌ಕಾಸ್ಟ್ ಪೋರ್ಟಲ್ ಮೂಲಕ ಆಗಿನ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ಪೀಠದ ವಿಚಾರಣೆಯನ್ನು ನೇರ ಪ್ರಸಾರ ಮಾಡಲಾಗಿತ್ತು. ಆದರೆ, ಅದು ನ್ಯಾ.ರಮಣ ಅವರು ಅಧಿಕಾರಾವಧಿ ಮುಕ್ತಾಯವಾಗಿದ್ದರಿಂದ ಔಪಚಾರಿಕ ಪ್ರಕ್ರಿಯೆಯಾಗಿತ್ತು.
ನೇರಪ್ರಸಾರದ ಮೊದಲ ವಿಚಾರಣೆಗಳು:ಇಂದು ಸಾಂವಿಧಾನಿಕ ಪೀಠದ ಕಲಾಪವನ್ನು ನೇರ ಪ್ರಸಾರ ಮಾಡಿರುವ ಸುಪ್ರೀಂಕೋರ್ಟ್, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿ ಕುರಿತ ವಿಚಾರಣೆಯನ್ನು ಕೈಗೆತ್ತಿಗೊಂಡಿದೆ. ಆರ್ಥಿಕ ದುರ್ಬಲ ವರ್ಗದವರಿಗೆ ಮೀಸಲಾತಿ ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವೆ ಇದರ ವಿವಾದ ಉಂಟಾಗಿದೆ. ಜೊತೆಗೆ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ವಿಚಾರಣೆಯನ್ನೂ ಸುಪ್ರೀಂಕೋರ್ಟ್ ನೇರ ಪ್ರಸಾರ ಮಾಡಲಾಗಿದೆ.
ಇದನ್ನೂ ಓದಿ:ಖರೀದಿಗೆ, ಬಿಲ್ ಪಾವತಿಗೆ ಮೊಬೈಲ್ ನಂಬರ್ ಕೇಳುವಂತಿಲ್ಲ: ಐಟಿ ಇಲಾಖೆ ವಾರ್ನಿಂಗ್