ಗ್ವಾಲಿಯರ್(ಮಧ್ಯಪ್ರದೇಶ): ಆಫ್ರಿಕಾದಿಂದ ಭಾರತಕ್ಕೆ ಆಗಮಿಸಿರುವ ಚೀತಾಗಳನ್ನು ಕುನೋ ನ್ಯಾಷನಲ್ ಪಾರ್ಕ್ನಲ್ಲಿ ಬಿಡುಗಡೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ದಿನವೇ ರಾಷ್ಟ್ರೀಯ ಉದ್ಯಾನದಲ್ಲಿ ಇವುಗಳನ್ನು ಬಿಡಲಾಗಿದೆ. ಈ ವೇಳೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಚರಿತ್ರೆಯಲ್ಲಿ ಇದು ಐತಿಹಾಸಿಕ ದಿನ. 1952ರ ನಂತರ ಭಾರತದಲ್ಲಿ ಚೀತಾಗಳು ನಶಿಸಿ ಹೋಗಿವೆ ಎಂಬ ಬೇಸರವಿತ್ತು. ಆದರೆ, ಇದೀಗ ನಾವು ಆಜಾದಿ ಕಾ ಅಮೃತ್ ಮಹೋತ್ಸವ ಸಂಭ್ರಮದಲ್ಲಿದ್ದು, ಈ ಹೊತ್ತಿನಲ್ಲಿ ದೇಶಕ್ಕೆ ಮತ್ತೊಂದು ಹೊಸ ಶಕ್ತಿ ಬಂದಿದೆ ಎಂದು ಬಣ್ಣಿಸಿದರು.
ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಈ ವಿಶೇಷ ಚೀತಾ ನೋಡಲು ಜನರು ತಾಳ್ಮೆಯ ಜೊತೆಗೆ ಮುಂದಿನ ಕೆಲ ತಿಂಗಳ ಕಾಲ ಕಾಯಬೇಕು. ಈ ಚೀತಾಗಳು ಈ ಪ್ರದೇಶದ ಬಗ್ಗೆ ಅರಿವಿಲ್ಲದೆ ಅತಿಥಿಗಳಾಗಿ ಆಗಮಿಸಿವೆ. ಅವು ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು, ತಮ್ಮ ಮನೆ ಮಾಡಿಕೊಳ್ಳಲು ಸಮಯ ನೀಡಬೇಕಾಗುತ್ತದೆ ಎಂದರು.
ಪಕೃತಿ, ಪರಿಸರ, ಪ್ರಾಣಿ, ಪಕ್ಷಿಗಳು ಭಾರತಕ್ಕೆ ಭದ್ರತೆಯ ನೆಲೆ. ಇವು ಸಂವೇದನೆ ಜೊತೆಗೆ ಆಧ್ಯಾತ್ಮಿಕ ಆಧಾರವಾಗಿವೆ. 21ನೇ ಶತಮಾನದಲ್ಲಿ ನಾವು ಭಾರತದ ಆರ್ಥಿಕತೆ ಜೊತೆಗೆ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದೇವೆ ಎಂಬುದರ ಬಗ್ಗೆ ಪ್ರಪಂಚಕ್ಕೆ ಸಂದೇಶ ನೀಡುತ್ತಿದ್ದೇವೆ ಎಂದು ನಮೋ ತಿಳಿಸಿದರು. ಅಂತಾರಾಷ್ಟ್ರೀಯ ನಿಯಮ ಪಾಲನೆ ಮಾಡುವ ಮೂಲಕ ನಾವು ಈ ಚೀತಾಗಳನ್ನ ಕರೆತಂದಿದ್ದೇವೆ. ಈ ಪ್ರಯತ್ನ ವಿಫಲಗೊಳ್ಳಲು ಬಿಡಲ್ಲ ಎಂದು ಹೇಳಿದರು.