ಮಲಪ್ಪುರಂ(ಕೇರಳ):ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಲಾಕ್ಡೌನ್ ವಿಧಿಸಲಾಗ್ತಿದೆ. ಈ ಮೂಲಕ ಡೆಡ್ಲಿ ವೈರಸ್ ತಡೆಗಟ್ಟುವ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಭಾರತದಲ್ಲಿ ಕಳೆದ 121 ವರ್ಷಗಳ ಹಿಂದೆಯೂ ಮಹಾಮಾರಿ ನಿಯಂತ್ರಣಕ್ಕೆ ಈ ನಿರ್ಬಂಧ ಕೈಗೊಳ್ಳಲಾಗಿತ್ತು ಎಂಬ ವಿಷಯ ಇದೀಗ ತಿಳಿದು ಬಂದಿದೆ.
ಪುರಾತತ್ವ ಶಾಸ್ತ್ರ ಇಲಾಖೆ ನೀಡಿರುವ ದಾಖಲೆಗಳ ಪ್ರಕಾರ, ಭಾರತದಲ್ಲಿ 'ಬುಬೊನಿಕ್ ಪ್ಲೇಗ್' ತಡೆಗಟ್ಟಲು 121 ವರ್ಷಗಳ ಹಿಂದೆ ಕೇರಳದಲ್ಲಿ ಲಾಕ್ಡೌನ್ ತರಹದ ನಿರ್ಬಂಧ ವಿಧಿಸಲಾಗಿತ್ತು. ಆ ಸಮಯದಲ್ಲಿ ಮಹಾಮಾರಿ ಪ್ಲೇಗ್ನಿಂದ ಇಡೀ ಭಾರತ ಹಾಗೂ ಇತರೆ ರಾಷ್ಟ್ರಗಳು ತತ್ತರಿಸಿ ಹೋಗಿದ್ದವು. ಇದರಿಂದ ಪಾರಾಗುವ ಉದ್ದೇಶದಿಂದ ಕೇರಳ ಈ ರೀತಿಯ ನಿರ್ಬಂಧ ಹಾಕಿಕೊಂಡಿತ್ತು ಎಂಬ ದಾಖಲೆ ಹಾಗೂ ಪತ್ರಿಕೆಯ ಕ್ಲಿಪಿಂಗ್ ಇದೀಗ ಲಭ್ಯವಾಗಿವೆ.
ಅಂದು ಮುದ್ರಣಗೊಂಡಿದ್ದ ಪತ್ರಿಕೆಯ ಪ್ರತಿ ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೆರಿಯಲ್ಲಿರುವ ಉನ್ನಿಕೃಷ್ಣನ್ ನಂಬೂತಿರಿ ಲಾಕ್ಡೌನ್ ಬಗ್ಗೆ ಲಭ್ಯವಿರುವ ದಾಖಲೆ ರಕ್ಷಣೆ ಮಾಡಿ ಇಟ್ಟಿದ್ದಾರೆ. ಬುಬೊನಿಕ್ ಪ್ಲೇಗ್ ಇಡೀ ದೇಶದ ತುಂಬ ಹರಡಿದ್ದ ಸಂದರ್ಭದಲ್ಲಿ ಕಠಿಣ ನಿಯಮ ಜಾರಿಗೊಳಿಲಾಗಿತ್ತು. ಅದಕ್ಕೆ ಲಾಕ್ಡೌನ್ ಎಂದು ಹೆಸರಿಡದಿದ್ದರೂ, ಸಾಂಕ್ರಾಮಿಕ ರೋಗ ಹರಡುವುದನ್ನ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರಯಾಣ ಹಾಗೂ ಒಟ್ಟಿಗೆ ಸೇರುವುದರ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಯಾವುದೇ ರೀತಿಯ ಸಾಮೂಹಿಕ ಕಾರ್ಯಕ್ರಮ, ಹಬ್ಬ-ಜಾತ್ರೆಗಳ ಮೇಲೆ ಸಂಪೂರ್ಣ ನಿಗಾ ವಹಿಸಲಾಗಿತ್ತು.
1890ರ ಸಮಯದಲ್ಲಿ ಇಂದಿನ ಕೋವಿಡ್ನಂತೆ ಪ್ಲೇಗ್ ಇಡೀ ಭಾರತದ ತುಂಬ ಹಬ್ಬಿತ್ತು. ಇದರಿಂದ ಪ್ರತಿದಿನ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಕೇರಳದಲ್ಲಿ ಅಂದಿನ ರಾಜ್ಯಪಾಲರು ಲಾಕ್ಡೌನ್ನಂತಹ ನಿರ್ಬಂಧ ವಿಧಿಸಿ ಆದೇಶಿಸಿದ್ದರು. ಅಂದಿನ ಮಲಬಾರ್ ಕಲೆಕ್ಟರ್ ಎಚ್.ಬಿ. ಜಾಕ್ಸನ್ ಈ ನಿರ್ಧಾರ ಕೈಗೊಂಡಿದ್ದರು.
ಇದನ್ನೂ ಓದಿ: ವಧು-ವರರಿಬ್ಬರಿಗೂ ಕೊರೊನಾ.. ಕೋವಿಡ್ ಕೇರ್ ಸೆಂಟರ್ನಲ್ಲೇ ಕಲ್ಯಾಣ!
ಪುರಾತತ್ವ ಇಲಾಖೆ ಈ ಮಾಹಿತಿ ಇದೀಗ ಡಿಜಿಟಲೀಕರಣಗೊಳಿಸಿ, ಸಂರಕ್ಷಣೆ ಮಾಡಿದೆ. ಮೂಲತಃ ಮಲಯಾಳಂನಲ್ಲಿ ಈ ಲೇಖನ ಪ್ರಕಟಗೊಂಡಿದೆ. ಪ್ರಮುಖವಾಗಿ ಮೈಸೂರು ಜಿಲ್ಲೆ, ಸೇಲಂ ಹಾಗೂ ಇತರೆ ಪ್ಲೇಗ್ ಪೀಡಿತ ಜಿಲ್ಲೆಗಳಿಗೆ ಜನರು ಪ್ರಯಾಣಿಸಲು ಹಾಗೂ ಅಲ್ಲಿಂದ ಬರಲು ನಿರ್ಬಂಧ ವಿಧಿಸಲಾಗಿತ್ತು. 1897ರ ಸಾಂಕ್ರಾಮಿಕ ಕಾಯ್ದೆ ಪ್ರಕಾರ, 1900ರ ನವೆಂಬರ್ 16ರನಿಂದ ಡಿಸೆಂಬರ್ವರೆಗೆ ಗುರುವಾಯೂರಿನಲ್ಲಿನ ಹಬ್ಬ ಮತ್ತು ಜಾತ್ರೆಗೆ ಪ್ರಯಾಣಿಸುವುದನ್ನ ನಿಷೇಧಿಸಲಾಗಿತ್ತು. ಯಾರಾದ್ರೂ ಪ್ರಯಾಣಿಸಿದರೆ ಹಾಗೂ ಉತ್ಸವದಲ್ಲಿ ಭಾಗಿಯಾಗಲು ಪ್ರಯತ್ನಿಸಿದರೆ ವಾಪಸ್ ಕಳುಹಿಸಲಾಗುವುದು ಎಂದು ಹೇಳಲಾಗಿತ್ತು.
ಅಂದಿನ ಮಲಬಾರ್ ಕಲೆಕ್ಟರ್ ಎಚ್ಬಿ ಜಾಕ್ಸನ್ ಹೊರಡಿಸಿದ ಆದೇಶ ಮತ್ತು ಅದನ್ನು ಜನಸಾಮಾನ್ಯರಿಗೆ ತಲುಪಿಸಲು ಪ್ರಕಟವಾದ ಪತ್ರಿಕೆ ಜಾಹೀರಾತು ಇಂದಿನ ಲಾಕ್ಡೌನ್ಗೆ ಸಾಕ್ಷಿಯಾಗಿದೆ. ಗುರುವಾಯೂರ್ ಏಕಾದಶಿ ಹಬ್ಬದ ಸಂದರ್ಭದಲ್ಲಿ ಪ್ಲೇಗ್ನ ಸಾಂಕ್ರಾಮಿಕ ರೋಗ ತಡೆಗಟ್ಟಲು ಮೈಸೂರು, ಸೇಲಂ ಮತ್ತು ಇತರೆ ಪ್ಲೇಗ್ ಪೀಡಿತ ಜಿಲ್ಲೆಗಳಿಂದ ಎಲ್ಲ ರೀತಿಯ ಪ್ರಯಾಣ ಮತ್ತು ಸಂಚಾರವನ್ನು ನಿಷೇಧಿಸಲಾಗಿತ್ತು.