ನವದೆಹಲಿ: ಬಿಜೆಪಿ ಸಂಸದ ಹಾಗೂ ನಾಗರಿಕ ವಿಮಾನಯಾನ ಖಾತೆಯ ಮಾಜಿ ಸಚಿವರೂ ಆಗಿರುವ ರಾಜೀವ್ ಪ್ರತಾಪ್ ರೂಡಿ ಆರು ಮಂದಿ ಬಿಜೆಪಿ ನಾಯಕರಿರುವ ವಿಮಾನವನ್ನು ಚಾಲನೆ ಮಾಡಿದ್ದಾರೆ. ಈ ಕುರಿತ ವಿಡಿಯೋವನ್ನು ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ವಾಣಿಜ್ಯ ವಿಮಾನದ ಪೈಲಟ್ ಕೂಡಾ ಆಗಿರುವ ರಾಜೀವ್ ಪ್ರತಾಪ್ ರೂಡಿ, ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರನ್ನು ಹೊಂದಿರುವ ಬಿಜೆಪಿ ನಾಯಕರಿದ್ದ ವಿಮಾನವನ್ನು ಚಲಾಯಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಮತ್ತು ಸಂಸದ ಬೇರೆ ಸಚಿವರು ಮತ್ತು ಸಂಸದರಿರುವ ವಿಮಾನವನ್ನು ಚಲಾಯಿಸಿರುವುದು ಅತ್ಯಂತ ಅಪರೂಪ ಘಟನೆಯಾಗಿದೆ.
ಟ್ವಿಟರ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಜೀವ್ ಪ್ರತಾಪ್ ರೂಡಿ, ವಿಮಾನದಲ್ಲಿ ಪ್ರಕಟಣೆ ಮಾಡುತ್ತಿರುವುದು ಕಾಣುತ್ತದೆ. ಈ ಸಂದರ್ಭದಲ್ಲಿ ವಿಮಾನದಲ್ಲಿ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ, ಉತ್ತರಾಖಂಡದ ಮಾಜಿ ಸಿಎಂ ತಿರಥ್ ಸಿಂಗ್ ರಾವತ್, ಸಂಸದ ಮನೋಜ್ ತಿವಾರಿ ಮತ್ತು ಇತರ ಸಂಸದರು ಮತ್ತು ಅವರ ಕುಟುಂಬಸ್ಥರು ಇದ್ದರು.
ಇದರ ಜೊತೆಗೆ ಸಂಸದ ಮನೋಜ್ ತಿವಾರಿಯ ಪುಟ್ಟ ಮಗಳು 6 ತಿಂಗಳ ಸಾನ್ವಿಕ ಕೂಡಾ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಎಲ್ಲರೂ ಪುಟಾಣಿಗೆ ಅಭಿನಂದಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ:ಮಳೆ ತಂದ ಅವಾಂತರ.. ಮುಂಬೈನಲ್ಲಿ ಮನೆ, ಗೋಡೆ, ಗುಡ್ಡ ಕುಸಿದು 21 ಜನ ದುರ್ಮರಣ