ಇಸ್ಲಾಮಾಬಾದ್/ನವದೆಹಲಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಮಹಿಳೆಯ ಶಿರಚ್ಛೇದಿಸಿ, ಎದೆಯ ಭಾಗವನ್ನು ಕತ್ತರಿಸಿ, ಆಕೆಯ ದೇಹದ ಚರ್ಮವನ್ನೂ ಸುಲಿದು ಹಾಕಿದ್ದಾರೆ. ಪಾಕಿಸ್ತಾನಿಗಳ ಅಮಾನವೀಯ ದುಷ್ಕೃತ್ಯಕ್ಕೆ ಪಾಕಿಸ್ತಾನದಲ್ಲೇ ಆಕ್ರೋಶ ಭುಗಿಲೆದ್ದಿದೆ. ಭಾರತ ಕೂಡ ಪ್ರಕರಣವನ್ನು ಬಲವಾಗಿ ಖಂಡಿಸಿ, ಪಾಕಿಸ್ತಾನ ಅಲ್ಪಸಂಖ್ಯಾತರನ್ನು ರಕ್ಷಿಸಬೇಕೆಂದು ಆಗ್ರಹಿಸಿದೆ.
ಘಟನೆಯ ವಿವರ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸುಮಾರು 40 ವರ್ಷದ ಹಿಂದೂ ಮಹಿಳೆ, ವಿಧವೆ ದಯಾ ಭೀಲ್ ಅವರನ್ನು ಕೊಲೆ ಮಾಡಲಾಗಿದೆ. ಭೀಬತ್ಸ್ಯ ಕೃತ್ಯವನ್ನು ಥಾರ್ಪಾರ್ಕರ್ ಸಿಂಧ್‌ನ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸೆನೆಟರ್ ಕೃಷ್ಣ ಕುಮಾರಿ ಖಚಿತಪಡಿಸಿದ್ದಾರೆ. ದಯಾ ಭೀಲ್ ಕೊಲೆ ನಡೆದ ಗ್ರಾಮಕ್ಕೆ ಅವರು ಪೊಲೀಸರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆಯ ಮಾಹಿತಿ ಪಡೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೃಷ್ಣ ಕುಮಾರಿ, 40 ವರ್ಷದ ದಯಾ ಭೀಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಕೆಯ ದೇಹವು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಲೆಯು ದೇಹದಿಂದ ಬೇರ್ಪಟ್ಟಿದೆ. ಆ ಅನಾಗರಿಕರು ಇಡೀ ತಲೆಯ ಮಾಂಸವನ್ನೂ ಹೊರಗೆ ತೆಗೆದುಹಾಕಿದ್ದಾರೆ. ಸಂತ್ರಸ್ತೆಯ ಗ್ರಾಮಕ್ಕೆ ಭೇಟಿ ನೀಡಿ ಸಿಂಜೋರೊ ಮತ್ತು ಶಾಹ್ಪುರ್ಚಕರ್ ಪೊಲೀಸರನ್ನು ಭೇಟಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.