ವಿಲ್ಲುಪುರಂ (ತಮಿಳುನಾಡು):ದೇವಸ್ಥಾನ ಪ್ರವೇಶ ಕುರಿತ ವಿವಾದದಿಂದಾಗಿ ತಮಿಳುನಾಡಿನಲ್ಲಿ ಹಿಂದು ದೇವಾಲಯಕ್ಕೆ ಬೀಗ ಹಾಕಿ ಬಂದ್ ಮಾಡಲಾಗಿದೆ. ಇಲ್ಲಿನ ವಿಲ್ಲುಪುರಂನಲ್ಲಿ ದೇವಸ್ಥಾನದಲ್ಲಿ ಅಸ್ಪೃಶ್ಯತೆ ಆಚರಣೆ ನಡೆಯುತ್ತಿದೆ ಎಂಬ ಆಪಾದನೆಯ ಹಿನ್ನೆಲೆಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆಯುತ್ತಿತ್ತು. ಇದೀಗ ಸಂಘರ್ಷ ತಪ್ಪಿಸಲು ತಮಿಳುನಾಡು ಸರ್ಕಾರ ದೇವಾಲಯವನ್ನು ಬಂದ್ ಮಾಡಿಸಿದೆ.
ವಿವರ: ಮೇಲ್ಪತಿ ಗ್ರಾಮದ ಧರ್ಮರಾಜ ದ್ರೌಪದಿ ಅಮ್ಮನ್ ದೇವಸ್ಥಾನ ವಿವಾದಕ್ಕೀಡಾಗಿದೆ. ಪ್ರವೇಶಕ್ಕೆ ಸಂಬಂಧಿಸಿದಂತೆ ಕೆಲವು ಪ್ರಬಲ ಜಾತಿಯವರು ಮತ್ತು ಕೆಳ ಜಾತಿ ನಡುವೆ ಜಗಳ ಏರ್ಪಟ್ಟಿದೆ. ಕೆಳ ಜಾತಿಯವರಿಗೆ ದೇವಾಲಯ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ವಿವಾದದ ಹಿನ್ನೆಲೆಯಲ್ಲಿ ವಿಲ್ಲುಪುರಂ ಜಿಲ್ಲಾ ಕಂದಾಯ ಆಯುಕ್ತ ರವಿಚಂದ್ರನ್ ಬುಧವಾರ ಸೀಲ್ ಹಾಕುವಂತೆ ಆದೇಶಿಸಿದರು.
ದೇವಾಲಯದ ದ್ವಾರಗಳನ್ನು ಮುಚ್ಚಿ ಬೀಗ ಹಾಕಿ ಸೀಲ್ ಹಾಕಲಾಗಿದೆ. ಅಲ್ಲದೇ, ದೇಗುಲದ ಮುಂದೆ ಅಧಿಕೃತ ನೋಟಿಸ್ ಅಂಟಿಸಲಾಗಿದ್ದು, "ಗ್ರಾಮದಲ್ಲಿ ಎರಡು ಜಾತಿಗಳ ನಡುವಿನ ಸಮಸ್ಯೆಯಿಂದಾಗಿ ವಾತಾವರಣ ಕಲುಷಿತವಾಗಿದೆ. ಇದು ಕಾನೂನು ಮತ್ತು ಸುವ್ಯವಸ್ಥೆಗೆ ತೊಡಕುಂಟಾಗಲಿದೆ. ಇದನ್ನು ಪರಿಗಣಿಸಿ, ಮುಂದಿನ ತೀರ್ಮಾನಕ್ಕೆ ಬರುವವರೆಗೆ ಎರಡೂ ಜಾತಿಗಳಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲ" ಎಂದು ಬರೆಯಲಾಗಿದೆ.
ಇದಕ್ಕೂ ಮುನ್ನ, ವಿಲ್ಲುಪುರಂ ಸಂಸದ ರವಿಕುಮಾರ್ ನೇತೃತ್ವದ ಸರ್ವಪಕ್ಷ ನಿಯೋಗ ಜಿಲ್ಲಾಧಿಕಾರಿ ಸಿ.ಪಳನಿ ಅವರನ್ನು ಭೇಟಿ ಮಾಡಿ, ದ್ರೌಪದಿ ಅಮ್ಮನ್ ದೇವಸ್ಥಾನಕ್ಕೆ ಯಾವುದೇ ಜಾತಿ ಭೇದವಿಲ್ಲದೆ ಎಲ್ಲ ಭಕ್ತರಿಗೆ ಪ್ರವೇಶ ನೀಡುವಂತೆ ಮನವಿ ಸಲ್ಲಿಸಿತು. ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಜಾತಿ ಬೇಧವಿಲ್ಲದೆ ಎಲ್ಲ ಭಕ್ತರಿಗೂ ದೇವಸ್ಥಾನದ ಒಳಗೆ ಪ್ರವೇಶ ಕಲ್ಪಿಸಬೇಕು. ಆದಿ ದ್ರಾವಿಡರನ್ನು ದೇಗುಲ ಪ್ರವೇಶಿಸದಂತೆ ತಡೆಯುವವರ ವಿರುದ್ಧ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.