ಪಾಟ್ನಾ : ಹಿಂದೂ ರಾಷ್ಟ್ರ ಎಂಬ ಪರಿಕಲ್ಪನೆಯು ಮಹಾತ್ಮಾ ಗಾಂಧೀಜಿಯವರ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಈ ಮೂಲಕ ಸಂಘ ಪರಿವಾರದ ಹಿಂದೂ ರಾಷ್ಟ್ರ ಪರಿಕಲ್ಪನೆಗೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಾರದ ಆರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿಂದೂ ರಾಷ್ಟ್ರ ಪರಿಕಲ್ಪನೆಗೆ ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದ್ದರು. ಇದರ ಬಗ್ಗೆ ಸಿಎಂ ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಗಾಂಧೀಜಿಯವರ ಸಿದ್ಧಾಂತಕ್ಕೆ ವಿರುದ್ಧವಾದ ಯಾವುದಕ್ಕೂ ನಾವು ಕಿವಿಗೊಡಬಾರದು. ಈ ದೇಶದಲ್ಲಿ ಎಲ್ಲ ಧರ್ಮದ ಜನರು ಒಗ್ಗಟ್ಟಾಗಿ ಬದುಕುತ್ತಿದ್ದಾರೆ. ಗಾಂಧೀಜಿ ಏಕತೆಗಾಗಿ ಹೋರಾಡಿದ್ದರು. ಇದೇ ಅವರ ಹತ್ಯೆಗೆ ಕಾರಣವಾಗಿತ್ತು ಎಂದು ನಿತೀಶ್ ಹೇಳಿದರು. ನಿತೀಶ್ ಕುಮಾರ್ ತಮ್ಮ ಆಡಳಿತದಲ್ಲಿ ಗಾಂಧೀಜಿಯವರ ಸಿದ್ಧಾಂತದ ಮೇಲೆ ನೀತಿಗಳನ್ನು ರೂಪಿಸುತ್ತಾರೆ ಎನ್ನಲಾಗಿದೆ.
ಜಾತ್ಯತೀತತೆಯ ಕುರಿತು ಗಾಂಧಿಯವರ ನಿಲುವಿನಿಂದ ವಿಮುಖರಾದರೆ ಅದು ವಿಕೃತಿಗಳಿಗೆ ಕಾರಣವಾಗಬಹುದು ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ. 1974 ರ ಬಿಹಾರ ಚಳವಳಿಯ ಕಾಲದಲ್ಲಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದ ನಿತೀಶ್ ಕುಮಾರ್ ಅವರು 1990 ರ ದಶಕದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಮತ್ತು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ಸುದೀರ್ಘ ಅವಧಿಗೆ ಸಿಎಂ ಆಗಿರುವ ಹೆಗ್ಗಳಿಕೆ ಹೊಂದಿರುವ ಇವರು, 2005 ರಲ್ಲಿ ಪ್ರಥಮ ಬಾರಿಗೆ ಬಿಹಾರ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಮೈತ್ರಿಯ ಹೊರತಾಗಿಯೂ ಬಿಜೆಪಿಯ ಹಿಂದುತ್ವ ನಿಲುವಿಗೆ ಮನ್ನಣೆ ನೀಡದೆ ಇವರು ಆಡಳಿತ ನಡೆಸಿದ್ದಾರೆ.