ಕರ್ನಾಟಕ

karnataka

ETV Bharat / bharat

ನಾಳೆ ಹರಿಯಾಣದ ನುಹುವಿನಲ್ಲಿ ಶೋಭಾಯಾತ್ರೆ: ಶಾಲೆ, ಕಾಲೇಜು, ಬ್ಯಾಂಕ್‌ಗಳು ಬಂದ್​- ನಿಷೇಧಾಜ್ಞೆ ಜಾರಿ - ನುಹ್ ಹಿಂಸಾಚಾರ

ಹರಿಯಾಣದ ಗಲಭೆಪೀಡಿತ ನುಹ್​ ಎಂಬಲ್ಲಿ ಬ್ರಜ್ ಮಂಡಲ್ ಶೋಭಾಯಾತ್ರೆ ಕೈಗೊಳ್ಳುವುದಾಗಿ ಹಿಂದೂ ಸಂಘಟನೆಗಳು ತಿಳಿಸಿದ್ದು, ಜಿಲ್ಲೆಯಲ್ಲಿ ಕಾನೂನು ಮತ್ತು ಶಾಂತಿ ಕಾಪಾಡುವ ಉದ್ದೇಶದಿಂದ ಸಿಆರ್‌ಪಿಸಿ ಸೆಕ್ಷನ್ 144 ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Nuh violence
ನುಹ್‌ ಹಿಂಸಾಚಾರ

By ETV Bharat Karnataka Team

Published : Aug 27, 2023, 1:12 PM IST

ನುಹ್ (ಹರಿಯಾಣ) : ಆಗಸ್ಟ್ 28 ರಂದು ನುಹ್‌ನಲ್ಲಿ ಬ್ರಜ್ ಮಂಡಲ್ ಶೋಭಾಯಾತ್ರೆ ಕೈಗೊಳ್ಳುವುದಾಗಿ ಹಿಂದೂ ಸಂಘಟನೆಗಳು ಮತ್ತೊಮ್ಮೆ ಘೋಷಿಸಿವೆ. ಈ ಯಾತ್ರೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿ ಧೀರೇಂದ್ರ ಖರ್ಗಟಾ ಸಭೆ ನಡೆಸಿ, ಆಗಸ್ಟ್ 26 ರಿಂದ 28 ರವರೆಗೆ ನುಹ್‌ನಲ್ಲಿ ಇಂಟರ್​ನೆಟ್ ಸೇವೆ ಸ್ಥಗಿತಗೊಳಿಸಿ ಆದೇಶಿಸಿದ್ದಾರೆ. ಮತ್ತೊಂದೆಡೆ, ಜಿಲ್ಲೆಯಲ್ಲಿ ಕಾನೂನು ಮತ್ತು ಶಾಂತಿ ಕಾಪಾಡುವ ಉದ್ದೇಶದಿಂದ ಸೆಕ್ಷನ್ 144 ಜಾರಿ ಮಾಡಲಾಗಿದೆ.

ಜಿಲ್ಲಾಡಳಿತ ಕೈಗೊಂಡ ಕ್ರಮಗಳು: ನಾಳೆ ಶಾಲಾ-ಕಾಲೇಜುಗಳು ಮತ್ತು ಬ್ಯಾಂಕ್‌ಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ತಿಳಿಸಿದೆ. ಶೋಭಾಯಾತ್ರೆ ಸಮಯದಲ್ಲಿ ಯಾವುದೇ ವ್ಯಕ್ತಿ ತನ್ನೊಂದಿಗೆ ಕತ್ತಿ, ಲಾಠಿ, ಈಟಿ, ಕೊಡಲಿ, ಚಾಕು ಸೇರಿದಂತೆ ಇತರೆ ಆಯುಧಗಳನ್ನು (ಸಿಖ್ ಧರ್ಮದ ಧಾರ್ಮಿಕ ಚಿಹ್ನೆಗಳನ್ನು ಹೊರತುಪಡಿಸಿ) ಕೊಂಡೊಯ್ಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಐದು ಅಥವಾ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಈ ನಿಯಮಗಳು ಸಶಸ್ತ್ರ ಪಡೆಗಳು, ಅರೆಸೇನಾ ಪಡೆಗಳು, ಪೊಲೀಸರು ಮತ್ತು ಕರ್ತವ್ಯದಲ್ಲಿರುವ ಇತರೆ ಸಾರ್ವಜನಿಕ ಸೇವಕರಿಗೆ ಅನ್ವಯಿಸುವುದಿಲ್ಲ. ಇನ್ನು ದ್ವೇಷ ಭಾಷಣಗಳ ಮೂಲಕ ವಾತಾವರಣದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿರುವವರ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು. ಸಾಮಾಜಿಕ ಮಾಧ್ಯಮಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿಪಿ ಗಡಿ ರಾಜ್ಯಗಳ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೆಕ್ಷನ್ 144 ಜಾರಿ: ನುಹ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಧೀರೇಂದ್ರ ಖಡ್ಗಟಾ ಅವರು ಆಗಸ್ಟ್ 26 ರಿಂದ ಆಗಸ್ಟ್ 28, 2023 ರವರೆಗೆ ನುಹ್ ಜಿಲ್ಲೆಯ ಎಲ್ಲಾ ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದಾರೆ. ಈ ಆದೇಶಗಳ ಸೂಕ್ತ ಪಾಲನೆ ಉಸ್ತುವಾರಿ ಜವಾಬ್ದಾರಿಯನ್ನು ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ವಹಿಸಲಾಗಿದೆ. ಇದಲ್ಲದೇ, ಜಿಲ್ಲಾ ಅಭಿವೃದ್ಧಿ ಮತ್ತು ಪಂಚಾಯತ್​ ಅಧಿಕಾರಿ, ಸಂಬಂಧಪಟ್ಟ ಪ್ರದೇಶದ ತಹಶೀಲ್ದಾರ್ ಮತ್ತು ಉಪ ತಹಶೀಲ್ದಾರ್, ಬ್ಲಾಕ್ ಅಭಿವೃದ್ಧಿ ಮತ್ತು ಪಂಚಾಯ​ತ್​ ಅಧಿಕಾರಿ, ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಭದ್ರತಾ ಪಡೆಗಳೊಂದಿಗೆ ಸಮನ್ವಯ ಸಾಧಿಸುವ ಜವಾಬ್ದಾರಿಯನ್ನು ನೀಡಲಾಗಿದೆ.

ಇದನ್ನೂ ಓದಿ :ನೂಹ್​ನಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗುವ ಭೀತಿ: ಮುಂಜಾಗ್ರತೆಗಾಗಿ ಎರಡು ದಿನ ಇಂಟರ್ನೆಟ್ ಬಂದ್!

ಏನಿದು ಘಟನೆ?:ಜುಲೈ 31 ರಂದು ನುಹ್‌ನಲ್ಲಿ ನಡೆದ ಬ್ರಜ್ ಮಂಡಲ್ ಯಾತ್ರೆಯಲ್ಲಿ ಎರಡು ಸಮುದಾಯಗಳ ನಡುವೆ ಕೋಮುಗಲಭೆ ನಡೆದಿತ್ತು. ಈ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಇಬ್ಬರು ಗೃಹರಕ್ಷಕ ದಳದ ಯೋಧರು ಸೇರಿದಂತೆ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮತ್ತು ಹರಿಯಾಣದ ಹಲವು ಜಿಲ್ಲೆಗಳಲ್ಲೂ ಈ ಹಿಂಸಾಚಾರ ಭುಗಿಲೆದ್ದಿದ್ದು, ಬಳಿಕ ಸುಮಾರು 6 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿತ್ತು. ಅಂದು ಜರುಗಿದ ಹಿಂಸಾಚಾರದಿಂದಾಗಿ ಬ್ರಜ್ ಮಂಡಲ ಯಾತ್ರೆಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿತ್ತು.

ABOUT THE AUTHOR

...view details