ಕರ್ನೂಲ್(ಆಂಧ್ರಪ್ರದೇಶ):ಕರ್ನೂಲ್ ಜಿಲ್ಲೆಯ ಕೌತಾಳಂ ಮಂಡಲ ಕೇಂದ್ರದಲ್ಲಿರುವ ಖಾದರ್ ಲಿಂಗ ಸ್ವಾಮಿ ದರ್ಗಾದಲ್ಲಿ ಜಾತಿ, ಧರ್ಮ ಭೇದವಿಲ್ಲದೆ ಯುಗಾದಿ ಹಬ್ಬ ಆಚರಿಸಲಾಗುತ್ತಿದ್ದು, ಶತಮಾನಗಳಿಂದಲೂ ದರ್ಗಾವು ಹಿಂದೂ-ಮುಸ್ಲಿಂರ ಮಧ್ಯೆ ಸಾಮರಸ್ಯ ಸಾರುತ್ತ ಬರುತ್ತಿದೆ. ಇಲ್ಲಿ ಪ್ರತಿ ವರ್ಷ ಮುಸ್ಲಿಂ ಬಾಂಧವರ ಸಮ್ಮುಖದಲ್ಲಿ ಬ್ರಾಹ್ಮಣರು ಯುಗಾದಿ ಪಂಚಾಂಗದ ಬಗ್ಗೆ ವಿವರಿಸುವುದು ವಿಶೇಷವಾಗಿದೆ.
ಪ್ರತಿವರ್ಷದಂತೆ ಈ ಸಲವೂ ಕೂಡ ಬ್ರಾಹ್ಮಣರಾದ ಬದರಿನಾಥ್ ಎಂಬುವರು ಕ್ಯಾಲೆಂಡರ್ ಬಗ್ಗೆ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ದರ್ಗಾ ಟ್ರಸ್ಟಿ ಮುನಪಾಷಾ ಹಾಗೂ ಅನೇಕ ಮುಸ್ಲಿಂ ಬಾಂಧವರು ಕುಳಿತುಕೊಂಡು ಪಂಚಾಂಗವನ್ನು ಆಲಿಸಿದರು. ಹತ್ತಿ ಬೆಳೆ ಹಾಗೂ ಕೆಂಪು ಕಾಳು ಚೆನ್ನಾಗಿ ಬೆಳೆದು, ಮಳೆ ಸಮೃದ್ಧಿಯಾಗಿ ಆಗಲಿದೆ ಎಂದು ಬದರಿನಾಥ್ ಪಂಚಾಂಗದ ಬಗ್ಗೆ ತಿಳಿಸಿದರು.