ನವದೆಹಲಿ: ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾದ ಶಿವಲಿಂಗದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಆರೋಪದ ಮೇಲೆ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನ ಸಹ ಪ್ರಾಧ್ಯಾಪಕ ರತನ್ ಲಾಲ್ ಅವರನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ದೆಹಲಿ ಮೂಲದ ವಕೀಲ ವಿನೀತ್ ಜಿಂದಾಲ್ ನೀಡಿದ ದೂರಿನ ಮೇರೆಗೆ ಮಂಗಳವಾರ ರಾತ್ರಿ ಲಾಲ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗದ ಬಗ್ಗೆ ಪ್ರಾಧ್ಯಾಪಕ ರತನ್ ಲಾಲ್ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಟ್ವೀಟ್ ಹಂಚಿಕೊಂಡಿದ್ದಾರೆ. ಈ ಪ್ರಕರಣವು ಸೂಕ್ಷ್ಮವಾಗಿದ್ದು, ನ್ಯಾಯಾಲಯದ ಮುಂದಿದೆ. ಈ ನಡುವೆಯೇ ಇವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನೀಡಿರುವ ಹೇಳಿಕೆ ಪ್ರಚೋದನಕಾರಿಯಾಗಿದೆ ಎಂದು ವಕೀಲರು ದೂರಿದ್ದರು.
ಅಂತೆಯೇ ಐಪಿಸಿ ಸೆಕ್ಷನ್ 153ಎ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ಗುಂಪು ದ್ವೇಷಕ್ಕೆ ಪ್ರಯೋಜನೆ ಮತ್ತು ಸೌಹಾರ್ದತೆ ಮೇಲೆ ದುಷ್ಪರಿಣಾಮ ಬೀರುವ ಕೃತ್ಯಗಳು) ಮತ್ತು 295ಎ (ಉದ್ದೇಶಪೂರ್ವಕ ಕೃತ್ಯ) ಅಡಿಯಲ್ಲಿ ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾಲ್ ಅವರನ್ನು ಬಂಧಿಸಿದ್ದಾರೆ.