ಗುವಾಹಟಿ (ಅಸ್ಸಾಂ):ತಮ್ಮನ್ನು ಅದಾನಿ ಗ್ರೂಪ್‌ಗೆ ಲಿಂಕ್ ಮಾಡಿರುವ ಟ್ವೀಟ್ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದರು. ಭಾನುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ, ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿಯವರು ಗುವಾಹಟಿಗೆ ಭೇಟಿ ನೀಡಿದ ನಂತರ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದರು.
''ರಾಹುಲ್ ಗಾಂಧಿ ಯಾವುದೇ ಟ್ವೀಟ್ ಮಾಡಿದರೂ ಅದು ಮಾನ ಹಾನಿಕರವಾಗಿರುತ್ತದೆ. ಪ್ರಧಾನಿ ರಾಜ್ಯ ಪ್ರವಾಸ ಮುಗಿದ ನಂತರ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುತ್ತೇನೆ. ಖಂಡಿತವಾಗಿಯೂ ಗುವಾಹಟಿಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು" ಎಂದು ಹಿಮಂತ ಬಿಸ್ವಾ ಸ್ಪಷ್ಟಪಡಿಸಿದರು. ಅದಾನಿ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿ ಶನಿವಾರ, ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಕೆಲವು ನಾಯಕರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.
"ಅವರು ಸತ್ಯವನ್ನು ಮರೆ ಮಾಚುತ್ತಾರೆ. ಅದಕ್ಕಾಗಿಯೇ ಅವರು ಪ್ರತಿದಿನ ದಾರಿ ತಪ್ಪಿಸುತ್ತಾರೆ. ಆದರೆ, ಪ್ರಶ್ನೆ ಒಂದೇ ಆಗಿರುತ್ತದೆ. ಅದಾನಿ ಕಂಪನಿಗಳಲ್ಲಿ 20,000 ಕೋಟಿ ರೂ. ಬೇನಾಮಿ ಹಣ ಯಾರದ್ದು?" ಎಂದು ಹಿಂದಿಯಲ್ಲಿ ಟ್ವೀಟ್ ರಾಹುಲ್ ಟ್ವೀಟ್ ಮಾಡಿದ್ದರು. ಜೊತೆಗೆ ಅದಾನಿ ಹೆಸರು ಸೆಳೆಯುವ ನಿಟ್ಟಿನಲ್ಲಿ ಮಾಜಿ ಕಾಂಗ್ರೆಸ್ ನಾಯಕರ ಹೆಸರಿನ ಅಕ್ಷರಗಳೊಂದಿಗೆ ಸಂಕ್ಷಿಪ್ತ ರೂಪದ ಚಿತ್ರವೊಂದನ್ನು ಶೇರ್ ಮಾಡಿದ್ದರು.
ಈ ಮೂಲಕ ಗುಲಾಂ ನಬಿ ಆಜಾದ್, ಜ್ಯೋತಿರಾದಿತ್ಯ ಸಿಂಧಿಯಾ, ಹಿಮಂತ ಬಿಸ್ವಾ ಶರ್ಮಾ, ಕಿರಣ್ ಕುಮಾರ್ ರೆಡ್ಡಿ ಮತ್ತು ಅನಿಲ್ ಆ್ಯಂಟನಿ ವಿರುದ್ಧ ರಾಹುಲ್ ಕಿಡಿಕಾರಿದ್ದರು. ಕಾಂಗ್ರೆಸ್ ತೊರೆದ ನಂತರ ಗುಲಾಂ ನಬಿ ಆಜಾದ್ ತಮ್ಮದೇ ಸ್ವಂತ ಪಕ್ಷ ಸ್ಥಾಪಿಸಿದ್ದಾರೆ. ಉಳಿದವರು ಆಡಳಿತಾರೂಢ ಬಿಜೆಪಿ ಸೇರಿದ್ದು, ಸಿಂಧಿಯಾ ಕೇಂದ್ರ ಸಚಿವರಾಗಿದ್ದಾರೆ. ಹಿಮಂತ ಬಿಸ್ವಾ ಅಸ್ಸಾಂನ ಮುಖ್ಯಮಂತ್ರಿಯಾಗಿದ್ದಾರೆ.
ನಿನ್ನೆಯೇ ಎಚ್ಚರಿಕೆ ನೀಡಿದ್ದ ಹಿಮಂತ ಬಿಸ್ವಾ: ಶನಿವಾರ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದ ಬೆನ್ನಲ್ಲೇ ಹಿಮಂತ ಬಿಸ್ವಾ ಎಚ್ಚರಿಕೆ ನೀಡಿದ್ದರು. "ಬೋಫೋರ್ಸ್ ಮತ್ತು ನ್ಯಾಷನಲ್ ಹೆರಾಲ್ಡ್ ಹಗರಣಗಳಿಂದ ನೀವು ಅಪರಾಧದ ಆದಾಯವನ್ನು ಎಲ್ಲಿ ಮರೆಮಾಡಿದ್ದೀರಿ ಎಂದು ನಿಮ್ಮನ್ನು ಎಂದಿಗೂ ಕೇಳದಿರುವುದು ನಮ್ಮ ಮರ್ಯಾದೆ. ನೀವು ಒಟ್ಟಾವಿಯೊ ಕ್ವಟ್ರೋಚಿ (ಇಟಲಿಯ ಉದ್ಯಮಿ)ಗೆ ಭಾರತೀಯ ನ್ಯಾಯದ ಹಿಡಿತದಿಂದ ಹಲವು ಬಾರಿ ತಪ್ಪಿಸಿಕೊಳ್ಳಲು ಹೇಗೆ ಅವಕಾಶ ಮಾಡಿಕೊಟ್ಟಿದ್ದೀರಿ?. ಏನೇ ಆಗಲಿ ನಾವು ನ್ಯಾಯಾಲಯದಲ್ಲಿ (Court of Law) ಭೇಟಿಯಾಗುತ್ತೇವೆ'' ಎಂದು ಅಸ್ಸಾಂ ಸಿಎಂ ಟ್ವೀಟ್ ಮಾಡಿದ್ದರು.
ಅಲ್ಲದೇ, ಮತ್ತೊಬ್ಬ ಮುಖಂಡ ಅನಿಲ್ ಆ್ಯಂಟನಿ ಟ್ವೀಟ್ ಮಾಡಿ, " ಶ್ರೀ ರಾಹುಲ್ ಗಾಂಧಿ, ರಾಷ್ಟ್ರೀಯ ಪಕ್ಷದ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಕರೆಯಲ್ಪಡುವವರು ರಾಷ್ಟ್ರೀಯ ನಾಯಕರೆಂತೆ ನಡೆದುಕೊಳ್ಳುತ್ತಿಲ್ಲ. ಬದಲಾಗಿ ಆನ್‌ಲೈನ್ ಅಥವಾ ಸಾಮಾಜಿಕ ಮಾಧ್ಯಮಗಳ ಸೆಲ್ ಟ್ರೋಲ್‌ನಂತೆ ಮಾತನಾಡುವುದನ್ನು ನೋಡಿ ದುಃಖಕರವಾಗಿದೆ. ದೇಶ ಕಟ್ಟುವ ಕೆಲಸಕ್ಕಾಗಿ ದಶಕಗಳಿಂದ ಕೊಡುಗೆ ನೀಡಿದ ಈ ದಿಗ್ಗಜರ ಜೊತೆ ನನ್ನ ಹೆಸರು ಕೂಡ ಇರುವುದನ್ನು ನೋಡಿ ಸಂತಸವಾಯಿತು. ನಾವು ಕುಟುಂಬದ ಬದಲು ದೇಶ ಮತ್ತು ಜನರಿಗಾಗಿ ಕೆಲಸ ಮಾಡಲು ಆದ್ಯತೆ ನೀಡಿದ್ದರಿಂದ ಕಾಂಗ್ರೆಸ್ ಪಕ್ಷ ತೊರೆಯಬೇಕಾಯಿತು" ಎಂದು ತಿರುಗೇಟು ನೀಡಿದ್ದರು.
ಇದನ್ನೂ ಓದಿ:ಅದಾನಿ, ಮಾಜಿ ಕಾಂಗ್ರೆಸ್ ನಾಯಕರ ವಿರುದ್ಧ ಟ್ವೀಟ್: ರಾಹುಲ್ ವಿರುದ್ಧ ಕುಟುಕಿದ ಅನಿಲ್ ಆಂಟನಿ