ಗುಜರಾತ್:ಗುಜರಾತ್ ವಿಧಾನಸಭಾ ಚುನಾವಣೆ ಕಣ ರಂಗೇರುತ್ತಿದ್ದು, ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆ ಆಮ್ ಆದ್ಮಿ ಪಾರ್ಟಿ ಕೂಡ ಗುಜರಾತ್ನ ಚುನಾವಣಾ ಅಖಾಡಕ್ಕೆ ಇಳಿದಿದೆ. ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಕಾಂಗ್ರೆಸ್ 43 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಮಹತ್ವದ ಬದಲಾವಣೆಯೊಂದು ಸಂಭವಿಸಿದೆ.
ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಹಿಮಾನ್ಶು ವ್ಯಾಸ್ ಅವರು ತಮ್ಮ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದಷ್ಟೇ ಅಲ್ಲದೆ ಅವರು ತಮ್ಮ ಸಾಗರೋತ್ತರ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸಿದ್ದಾರೆ. ಕಾಂಗ್ರೆಸ್ಗೆ ರಾಜೀನಾಮೆ ಸಲ್ಲಿದ ನಂತರ ಶೀಘ್ರದಲ್ಲೇ ಅವರು ಬಿಜೆಪಿ ಪಕ್ಷವನ್ನು ಸೇರಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜೀನಾಮೆ ಪತ್ರ ಸಲ್ಲಿರುವ ಹಿಮಾನ್ಶು ವ್ಯಾಸ್ ಅವರು, ಕಾಂಗ್ರೆಸ್ನಲ್ಲಿ ನಮ್ಮ ಮಾತಿಗೆ ಬೆಲೆಯಿಲ್ಲ. ರಾಹುಲ್ ಗಾಂಧಿ ಅವರನ್ನು ಭೇಟಿ ಆಗುವುದು ಕೂಡ ಕಷ್ಟವಾಗಿದೆ. ದೆಹಲಿಯಲ್ಲೂ ಭೇಟಿ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಗುಜರಾತ್ನಲ್ಲಿ ಬಿಜೆಪಿ ವಿಜಯ ಸಾಧಿಸುತ್ತಿದೆ. ಬಿಜೆಪಿಯೇ ಮತ್ತೆ ಸರ್ಕಾರ ರಚಿಸಲಿದೆ. ಅಲ್ಲದೆ ಈ ಬಾರಿ ಗುಜರಾತ್ ಅಖಾಡದಲ್ಲಿ ಆಮ್ ಆದ್ಮಿ ಪಾರ್ಟಿ ಕೂಡ ಸ್ಪರ್ಧಿಸುತ್ತಿರುವುದರಿಂದ ಕಾಂಗ್ರೆಸ್ಗೆ ನಷ್ಟವಾಗಿದೆ. ನಾಯಕತ್ವ ಹಾಗೂ ಸಂಘಟನೆಯಲ್ಲಿ ಸಂವಹನದ ಕೊರತೆಯಿದೆ. ಪ್ರಾಣ ಕೊಟ್ಟು ಪಕ್ಷಕ್ಕಾಗಿ ದುಡಿಯುವವರ ಬಗ್ಗೆ ಪಕ್ಷದಲ್ಲಿ ಗೌರವ ಕಡಿಮೆಯಾಗಿದೆ ಎಂದು ದೂರಿದ್ದಾರೆ.