ಕರ್ನಾಟಕ

karnataka

ETV Bharat / bharat

Himachal Rains: ಹಿಮಾಚಲ ಪ್ರದೇಶದಲ್ಲಿ ಮುಂದುವರೆದ ಮಳೆ ಅಬ್ಬರ; 3 ದಿನದಲ್ಲಿ 72 ಮಂದಿ ಸಾವು!

Himachal Pradesh Rain Havoc: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ 72 ಮಂದಿ ಸಾವನ್ನಪ್ಪಿದ್ದಾರೆ.

himachal-rains-floods-people-affected-by-floods-and-landslides-72-people-died-in-3-days-cm-sukhu-said-it-will-take-one-year-to-get-back-on-track
ಹಿಮಾಚಲಪ್ರದೇಶದಲ್ಲಿ ಮುಂದುವರೆದ ಮಳೆ ಅಬ್ಬರ : 3 ದಿನದಲ್ಲಿ 72 ಮಂದಿ ಸಾವು : ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಸುಖು

By

Published : Aug 17, 2023, 10:18 PM IST

ಶಿಮ್ಲಾ (ಹಿಮಾಚಲ ಪ್ರದೇಶ) : ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ಜೋರು ಮಳೆ ಬೀಳುತ್ತಿದೆ. ವರ್ಷಧಾರೆಯ ಆರ್ಭಟ ಹಲವು ಅವಾಂತರಗಳನ್ನು ಸೃಷ್ಟಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಗೆ ಗುಡ್ಡಗಳು ಕುಸಿದು, ಗುಡ್ಡದಂಚಿನ ಮನೆಗಳು ನೆಲಸಮವಾಗಿವೆ. ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮೂರು ದಿನಗಳಲ್ಲಿ 72 ಮಂದಿ ಅಸುನೀಗಿದ್ದಾರೆ.

ಶಿಮ್ಲಾದಿಂದ ಕುಲು ಜಿಲ್ಲೆಯವರೆಗೆ, ಮಂಡಿಯಿಂದ ಚಂಬಾ ಜಿಲ್ಲೆಯವರೆಗೆ ಜನಜೀವನಕ್ಕೆ ತೀವ್ರ ತೊಂದರೆಯಾಗಿದೆ. ನೂರಾರು ರಸ್ತೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ವಿದ್ಯುತ್​ ಮತ್ತು ನೀರಾವರಿ ಯೋಜನೆಗಳು ಹಾನಿಗೊಳಗಾಗಿವೆ.

ಜೂನ್​ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಮುಂಗಾರು ಅಬ್ಬರ ಪ್ರಾರಂಭವಾಗಿತ್ತು. ಜೂನ್​ ಮತ್ತು ಜುಲೈನಲ್ಲಿ ಸುರಿದ ಧಾರಾಕಾರ ಮಳೆಗೆ ರಾಜ್ಯ ಅಕ್ಷರಶಃ ನಲುಗಿದೆ. ಹಿಮಾಚಲದಲ್ಲಿ ಕಳೆದ ಐದು ದಶಕ ಕಾಣದ ಮಳೆ ಸುರಿದಿದೆ. ಬಿರುಗಾಳಿಸಹಿತ ಮಳೆಯಿಂದ ಅಪಾರ ಹಾನಿ ಉಂಟಾಗಿತ್ತು.

72 ಮಂದಿ ಸಾವು: ಆಗಸ್ಟ್ ​13, 14 ಮತ್ತು 15ರಂದು ಸುರಿದ ಭಾರಿ ಮಳೆಗೆ 72 ಜನರು ಬಲಿಯಾಗಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಮಳೆಯಿಂದಾಗಿ ಭೂ ಕುಸಿತ ಉಂಟಾಗಿರುವ ಸ್ಥಳಗಳಲ್ಲಿ ಹಲವರು ಸಿಲುಕಿರುವ ಶಂಕೆ ಇದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಪೈಕಿ 50 ಮಂದಿ ಆಗಸ್ಟ್​ 13 ಮತ್ತು 14ರಂದು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಪ್ರಧಾನ ಕಾರ್ಯದರ್ಶಿ ಓಂಕಾರ್ ಚಂದ್ ಶರ್ಮಾ ಹೇಳಿದ್ದಾರೆ.

ಕಾಂಗ್ರಾ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ: ಕುಲು, ಮಂಡಿ, ಸೋಲನ್ ಮತ್ತು ಶಿಮ್ಲಾ ಜಿಲ್ಲೆಗಳು ಜಲಾವೃತವಾಗಿವೆ. ಕಾಂಗ್ರಾ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಬುಧವಾರ ಮುಖ್ಯಮಂತ್ರಿ ಸುಖ್ವಿಂದರ್ ಸುಖು ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಕಾಂಗ್ರಾ ಜಿಲ್ಲೆಯ ಫತೇಪುರ್ ಮತ್ತು ಇಂದೋರಾ ಕ್ಷೇತ್ರಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ಇದಕ್ಕೆ ಪಾಂಗ್ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿರುವುದೇ ಕಾರಣ ಎಂದು ಸಿಎಂ ಸುಖು ಹೇಳಿದರು. ಸದ್ಯ ಪ್ರವಾಹಪೀಡಿತ ಪ್ರದೇಶಗಳಿಂದ ಸುಮಾರು 2,200 ಜನರನ್ನು ಸ್ಥಳಾಂತರಿಸಲಾಗಿದೆ. ಇಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ಅಪಾರ ಹಾನಿ:ಕಳೆದ ನಾಲ್ಕು ದಿನದಲ್ಲಿ ರಾಜ್ಯದಲ್ಲಿ ಶೇ.157ಕ್ಕೂ ಹೆಚ್ಚು ಮಳೆಯಾಗಿದೆ. ಇದರಿಂದಾಗಿ ಸುಮಾರು 1,220 ರಸ್ತೆಗಳು ಮುಚ್ಚಲ್ಪಟ್ಟಿದ್ದು, 400 ರಸ್ತೆಗಳನ್ನು ಸದ್ಯ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಶಿಮ್ಲಾದಲ್ಲಿ 500 ಮರಗಳು ಧರಾಶಾಹಿಯಾಗಿವೆ. ರಾಜ್ಯ ವಿಪತ್ತು ನಿರ್ವಹಣಾ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ 1762 ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, 8,952 ಮನೆಗಳು ಹಾನಿಗೊಳಗಾಗಿವೆ. ಈ ವರ್ಷ ಮುಂಗಾರು ಅವಧಿಯಲ್ಲಿ ಇದುವರೆಗೆ 113 ಭೂ ಕುಸಿತಗಳು ಸಂಭವಿಸಿವೆ. ಇದುವರೆಗೆ 2,500 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಕೇಂದ್ರದಿಂದ ನೆರವಿನ ನಿರೀಕ್ಷೆ: ಹಿಮಾಚಲದಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಹಲವು ರಸ್ತೆಗಳು ಕೊಚ್ಚಿ ಹೋಗಿದ್ದು, ಸಾವಿರಾರು ಮನೆಗಳಿಗೂ ಹಾನಿಯಾಗಿದೆ. ಕೇಂದ್ರದ ತಂಡವು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಕೇಂದ್ರ ಸರ್ಕಾರದಿಂದ ನೆರವು ನಿರೀಕ್ಷಿಸಲಾಗಿದೆ ಎಂದು ಸಿಎಂ ಸುಖು ತಿಳಿಸಿದ್ದಾರೆ.

ಇದನ್ನೂ ಓದಿ :ಧಾರಾಕಾರ ಮಳೆ, ಭೂಕುಸಿತಕ್ಕೆ ತತ್ತರಿಸಿದ ಹಿಮಾಚಲ.. 800 ಜನರನ್ನು ರಕ್ಷಿಸಿದ ವಾಯುಪಡೆ

ABOUT THE AUTHOR

...view details