ಮಂಡಿ, ಹಿಮಾಚಲ ಪ್ರದೇಶ:ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಮತ್ತೊಮ್ಮೆ ಅವಾಂತರವನ್ನೇ ಸೃಷ್ಟಿಸಿದೆ. ಭಾನುವಾರದಂದು ಎಡೆಬಿಡದೆ ಸುರಿದ ಮಳೆ ಮತ್ತು ನೀರಿನ ಮಟ್ಟ ಏರಿಕೆಯಿಂದಾಗಿ ಕೋಲ್ಡಮ್‌ನಲ್ಲಿ ಅರಣ್ಯ ಸಿಬ್ಬಂದಿ ಸೇರಿದಂತೆ ಹಲವಾರು ಜನರು ಸಿಲುಕಿಕೊಂಡಿದ್ದರು. ಈಗ ಅವರೆಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಸ್ಟೀಮರ್ ಸಹಾಯದಿಂದ ಸಂತ್ರಸ್ತರನ್ನು ಸ್ಥಳಾಂತರಿಸುವ ಪ್ರಯತ್ನಗಳು ತಡರಾತ್ರಿಯಿಂದ ಪ್ರಾರಂಭವಾಗಿದ್ದು, ಸೋಮವಾರ ಬೆಳಗಿನ ಜಾವ 3 ಗಂಟೆಯವರೆಗೆ ನಡೆದ ರಕ್ಷಣಾ ಕಾರ್ಯಾಚರಣೆ ಮೂಲಕ ಇವರೆಲ್ಲರನ್ನು ಅಣೆಕಟ್ಟಿನಿಂದ ಹೊರ ತರಲಾಗಿದೆ.
ಕೋಲ್ಡಮ್‌ನಲ್ಲಿ ಸಿಲುಕಿಕೊಂಡಿರುವ ಹತ್ತು ಜನರಲ್ಲಿ ಐವರು ಸ್ಥಳೀಯರು ಮತ್ತು ಐವರು ಅರಣ್ಯ ಇಲಾಖೆ ನೌಕರರು ಸೇರಿದ್ದರು. ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಸ್ಥಳದಲ್ಲಿ NTPC ಅಧಿಕಾರಿಗಳು, DC, CISF ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು.
ಮಂಡಿಯ ಡೆಪ್ಯುಟಿ ಕಮಿಷನರ್ ಅರಿಂದಮ್ ಚೌಧರಿ ಮಾತನಾಡಿ, ಕೋಲ್ ಡ್ಯಾಮ್ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ ಐವರು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಐವರು ಸ್ಥಳೀಯರು ಸೇರಿದಂತೆ ಹತ್ತು ಜನರು ದೋಣಿಯಲ್ಲಿ ಸಿಲುಕಿಕೊಂಡಿದ್ದರು. ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಆಡಳಿತ ತಂಡಗಳು ಸ್ಥಳದಲ್ಲಿವೆ. ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಈಗ ಅವರೆಲ್ಲರನ್ನು ಸುರಕ್ಷಿತವಾಗಿ ಕರೆ ತರಲಾಗಿದೆ ಎಂದು ಡಿಸಿ ಚೌಧರಿ ಹೇಳಿದ್ದಾರೆ.
ರಕ್ಷಣಾ ತಂಡವನ್ನು ಶ್ಲಾಘಿಸಿದ ಡಿಸಿ: ಮಳೆ ಮತ್ತು ಕಷ್ಟಕರ ಪರಿಸ್ಥಿತಿಯ ನಡುವೆ ಸಂತ್ರಸ್ತರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಡಿಸಿ ಚೌಧರಿ ತಿಳಿಸಿದ್ದಾರೆ. ಬಳಿಕ ರಕ್ಷಣಾ ತಂಡವನ್ನು ಶ್ಲಾಘಿಸಿದರು. ಕೋಲ್ ಅಣೆಕಟ್ಟಿನ ಸ್ಥಳದಲ್ಲಿ ಸಿಕ್ಕಿಬಿದ್ದ ಜನರಲ್ಲಿ ಐವರು ಅರಣ್ಯ ಇಲಾಖೆ ನೌಕರರನ್ನು ಬಹದ್ದೂರ್ ಸಿಂಗ್, ಭೂಪೇಶ್ ಠಾಕೂರ್, ರೂಪ್ ಸಿಂಗ್, ಬಾಬು ರಾಮ್ ಮತ್ತು ಅಂಗದ್ ಕುಮಾರ್ ಎಂದು ಗುರುತಿಸಲಾಗಿದೆ. ಇತರ ಐವರು ಸ್ಥಳೀಯರನ್ನು ನೈನ್ ಸಿಂಗ್, ಡಾಗು ರಾಮ್, ಹೇಮ್ ರಾಜ್, ಬುಧಿ ಸಿಂಗ್ ಮತ್ತು ಧರ್ಮೇಂದ್ರ ಎಂದು ಗುರುತಿಸಲಾಗಿದೆ. ಅಣೆಕಟ್ಟಿನಲ್ಲಿ ಸಿಲುಕಿರುವ ಕೆಲವು ವಿಡಿಯೋಗಳು ಸಹ ಹೊರಬಂದಿವೆ. ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ಅಣೆಕಟ್ಟಿನಲ್ಲಿ ಸಿಲುಕಿರುವ ಜನರನ್ನು ಉಳಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ.