ಶಿಮ್ಲಾ (ಹಿಮಾಚಲ ಪ್ರದೇಶ):ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಸಮ್ಮರ್ ಹಿಲ್ ಪ್ರದೇಶದಲ್ಲಿ ಆಗಸ್ಟ್ 14 ರಂದು ಸಂಭವಿಸಿದ ಭೂಕುಸಿತ ದುರಂತದಲ್ಲಿ ಇಂದು(ಭಾನುವಾರ) ಮತ್ತೊಂದು ಶವ ಹೊರತೆಗೆಯುವ ಮೂಲಕ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಅಲ್ಲದೇ, ಇನ್ನೂ ಮೂವರು ನಾಪತ್ತೆಯಾಗಿದ್ದಾರೆ. ಭದ್ರತಾ ಮತ್ತು ವಿಪತ್ತು ಪರಿಹಾರ ಪಡೆಗಳು ಸತತ ಏಳನೇ ದಿನವೂ ಶೋಧ ಕಾರ್ಯಾಚರಣೆ ಮುಂದುವರಿಸಿವೆ.
ಹಲವು ದಿನಗಳಿಂದ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದಲ್ಲಿ ಭಾರೀ ಅನಾಹುತಗಳು ಸಂಭವಿಸಿವೆ. ಆಗಸ್ಟ್ 14 ರಂದು ಸಮ್ಮರ್ ಹಿಲ್ ಪ್ರದೇಶದ ಪ್ರಾಚೀನ ಶಿವಬರಿ ದೇವಸ್ಥಾನ ಭೂಕುಸಿತಕ್ಕೆ ತುತ್ತಾಗಿದೆ. ದೇವಸ್ಥಾನದಲ್ಲಿದ್ದ 20 ಮಂದಿ ಭಕ್ತರು ಅವಶೇಷಗಳಡಿ ಸಿಲುಕಿದ್ದರು. ರಕ್ಷಣಾ ಮತ್ತು ವಿಪತ್ತು ಪರಿಹಾರ ತಂಡಗಳು ಮಳೆ ಅಡ್ಡಿ ಮಧ್ಯೆಯೂ ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈವರೆಗೂ ಮಣ್ಣಿನಡಿಯಿಂದ 17 ಶವಗಳನ್ನು ಪತ್ತೆ ಮಾಡಿ ಹೊರತೆಗೆಯಲಾಗಿದೆ.
ಇನ್ನೂ 3 ರಿಂದ 4 ಮಂದಿ ಭೂಕುಸಿತದಲ್ಲಿ ಸಿಲುಕಿದ್ದಾರೆ. ಅವರ ಶವಗಳು ಇನ್ನೂ ಪತ್ತೆಯಾಗಿಲ್ಲ. ಜಿಲ್ಲಾ ಪೊಲೀಸ್, ಸೇನೆ, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ತಂಡಗಳು ಜಂಟಿಯಾಗಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
7 ನೇ ದಿನದ ರಕ್ಷಣಾ ಕಾರ್ಯಾಚರಣೆಯಲ್ಲಿ ಮತ್ತೊಂದು ಮೃತದೇಹವನ್ನು ಪತ್ತೆ ಮಾಡಲಾಗಿದೆ. ಉಳಿದವರಿಗಾಗಿ ರಕ್ಷಣಾ ಪಡೆಗಳು ಶೋಧ ಕಾರ್ಯ ನಡೆಸುತ್ತಿವೆ. ಸಿಬ್ಬಂದಿ ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿ ರೂಪ್ ಶರಣ್ ಹೇಳಿದ್ದಾರೆ.