ಕಾಂಗ್ರಾ (ಹಿಮಾಚಲ ಪ್ರದೇಶ):ಹಿಮಾಚಲ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್ ವೇಳೆ ನಾಪತ್ತೆಯಾಗಿದ್ದ ಪೋಲೆಂಡ್ ಪ್ರಜೆಯೊಬ್ಬರ ಮೃತದೇಹವನ್ನು 11 ದಿನಗಳ ನಂತರ ಪತ್ತೆಯಾಗಿದೆ. ಅಕ್ಟೋಬರ್ 23ರಂದು ಈ ವಿದೇಶಿ ಪ್ರಜೆ ಧರ್ಮಶಾಲಾ ಬಳಿಯ ಧೌಲಾಧರ್ ಬೆಟ್ಟಗಳಲ್ಲಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ಮೃತರನ್ನು ಆಂಡ್ರ್ಯೂಸ್ ಕುಲವಿಕ್ ಎಂದು ಗುರುತಿಸಲಾಗಿದೆ.
ಪೋಲೆಂಡ್ ಮೂಲದ ಆಂಡ್ರ್ಯೂಸ್ ಕುಲವಿಕ್ ಅಕ್ಟೋಬರ್ 23ರಂದು ಇಲ್ಲಿನ ಬೈಜನಾಥ್‌ನ ಬೀಡ್‌ನಿಂದ ಏಕಾಂಗಿಯಾಗಿ ಪ್ಯಾರಾಗ್ಲೈಡಿಂಗ್ ಹಾರಾಟ ನಡೆಸುತ್ತಿದ್ದರು. ಈ ಸಂದಭರ್ದಲ್ಲಿ ಧರ್ಮಶಾಲಾ ಬಳಿಯ ಧೌಲಾಧರ್ ಬೆಟ್ಟಗಳಲ್ಲಿ ನಾಪತ್ತೆಯಾಗಿದ್ದಾರೆ. ಅವರೊಂದಿಗೆ ಹಾರಾಟ ಮಾಡುತ್ತಿದ್ದ ಇತರ ಮೂವರು ಸಹಚರರನ್ನು ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಲಾಗಿತ್ತು. ಆದರೆ, ಆಂಡ್ರ್ಯೂಸ್ ಕುಲವಿಕ್ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲಿಲ್ಲ.
ಮತ್ತೊಂದೆಡೆ, ಆಂಡ್ರ್ಯೂಸ್ ನಾಪತ್ತೆ ಬಗ್ಗೆ ಅವರ ಪುತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆಗ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಶುರು ಮಾಡಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸರು ಸ್ವಂತ ಮತ್ತು ಖಾಸಗಿ ಹೆಲಿಕಾಪ್ಟರ್‌ಗಳಿಂದ ಹುಡುಕಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ಭಾರತೀಯ ವಾಯುಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ ಸಹಾಯವನ್ನು ಪೊಲೀಸರು ಕೋರಿದ್ದರು.
ಈ ಪ್ರದೇಶವು ಸಮುದ್ರ ಮಟ್ಟದಿಂದ 3650 ಮೀಟರ್ ಎತ್ತರದಲ್ಲಿದೆ. ಅಂತಹ ಪರಿಸ್ಥಿತಿಯಲ್ಲಿ ಶೋಧ ಕಾರ್ಯವು ತುಂಬಾ ಕಷ್ಟವಾಗಿತ್ತು. ಆದ್ದರಿಂದ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ವಾಯುಪಡೆಯೊಂದಿಗೆ ಮನಾಲಿ ಪರ್ವತಾರೋಹಣ ರಕ್ಷಣಾ ತಂಡದ ನೆರವನ್ನೂ ಪೊಲಿಸರು ಪಡೆದಿದ್ದರು. ಆದರೂ, ಸತತ ಪ್ರಯತ್ನಗಳ ನಂತರವೂ ಯಾವುದೇ ಫಲಸಿಕ್ಕಿರಲಿಲ್ಲ. ಹೀಗಾಗಿ ಭಾರತೀಯ ಸೇನೆಯ ವಿಶೇಷ ತುಕಡಿ ಸಹ ಶೋಧ ಕಾರ್ಯಾಚರಣೆಗೆ ಕೈಜೋಡಿಸಿತ್ತು.
ಅಂತಿಮವಾಗಿ ಧೌಲಾಧರ್‌ನ ತಪ್ಪಲಿನಲ್ಲಿರುವ ಬೆಟ್ಟಗಳಲ್ಲಿ ಆಂಡ್ರ್ಯೂಸ್ ಬಳಸಿದ್ದ ಗ್ಲೈಡರ್ ಪತ್ತೆಯಾಗಿತ್ತು. ಆಗ ರಕ್ಷಣಾ ತಂಡದ ಸಿಬ್ಬಂದಿ ಅಲ್ಲಿಗೆ ಬಂದಿಳಿದು ಪರಿಶೀಲಿಸಿದಾಗ ಆಂಡ್ರ್ಯೂಸ್ ಮೃತದೇಹ ಸಹ ಪತ್ತೆಯಾಗಿದೆ. ಆದರೆ, ಅಲ್ಲಿಂದ ಮೃತದೇಹವನ್ನು ತರುವುದು ಸಹ ಸವಾಲಿನ ಕೆಲಸವಾಗಿತ್ತು. ಎನ್‌ಡಿಆರ್‌ಎಫ್ ಮತ್ತು ಸೇನಾ ಸಿಬ್ಬಂದಿ ಸುಮಾರು 4 ಕಿಲೋಮೀಟರ್‌ಗಳ ಅತ್ಯಂತ ಕಿರಿದಾದ ಬೆಟ್ಟಗಳಿಂದ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಈ ಬಗ್ಗೆ ಕಾಂಗ್ರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಲಿನಿ ಅಗ್ನಿಹೋತ್ರಿ ಮಾಹಿತಿ ನೀಡಿ, 11 ದಿನಗಳ ನಂತರ ರಕ್ಷಣಾ ತಂಡಗಳು ಅಂತಿಮವಾಗಿ ಆಂಡ್ರ್ಯೂಸ್ ಕುಲವಿಕ್ ಮೃತದೇಹವನ್ನು ಹೊರತೆಗೆದಿವೆ. ಮೃತದೇಹವನ್ನು ಧರ್ಮಶಾಲಾಕ್ಕೆ ಸಾಗಿಸಲಾಗಿದೆ. ಈ ಕುರಿತು ರಾಯಭಾರ ಕಚೇರಿಯನ್ನು ಸಂಪರ್ಕಿಸಲಾಗಿದೆ. ಜೊತೆಗೆ ಕುಟುಂಬ ಸದಸ್ಯರಿಗೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕರ್ವಾ ಚೌತ್ ಹಬ್ಬದ ವೇಳೆ ದುರಂತ: ಚಂದ್ರನ ನೋಡುವಾಗ ಪತ್ನಿಯ ಎದುರೇ ಮಾಳಿಗೆಯಿಂದ ಬಿದ್ದು ಪತಿ ಸಾವು