ಶಿಮ್ಲಾ(ಹಿಮಾಚಲ ಪ್ರದೇಶ):ಭಾರತೀಯ ಜನತಾ ಪಕ್ಷ (ಬಿಜೆಪಿ) ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದೆ. ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಅವರು ಶಿಮ್ಲಾದಲ್ಲಿ ಪ್ರಣಾಳಿಕೆ ಪ್ರಕಟಿಸಿದರು.
11 ಬದ್ಧತೆಗಳ ಕುರಿತು ಸಂಕಲ್ಪ ಪತ್ರ ಬಿಡುಗಡೆ ಮಾಡಿದ ನಡ್ಡಾ, "ಈ ಬದ್ಧತೆಗಳು ಸಮಾಜದಲ್ಲಿ ಏಕರೂಪತೆಯನ್ನು ತರುತ್ತವೆ. ಯುವಕರು ಮತ್ತು ರೈತರನ್ನು ಸಬಲಗೊಳಿಸುತ್ತವೆ. ತೋಟಗಾರಿಕೆಯನ್ನು ಬಲಪಡಿಸುತ್ತದೆ. ಜತೆಗೆ ಸರ್ಕಾರಿ ನೌಕರರಿಗೆ ನ್ಯಾಯ ನೀಡುತ್ತದೆ ಹಾಗು ಧಾರ್ಮಿಕ ಪ್ರವಾಸೋದ್ಯಮವನ್ನು ಮುನ್ನಡೆಸುತ್ತವೆ" ಎಂದು ಭರವಸೆ ನೀಡಿದರು.
ಪ್ರಣಾಳಿಕೆಯಲ್ಲಿರುವ ಪ್ರಮುಖಾಂಶಗಳು:
- ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ.
- ಹಂತ ಹಂತವಾಗಿ 8 ಲಕ್ಷ ಉದ್ಯೋಗ ಸೃಷ್ಟಿ.
- ರಾಜ್ಯದಲ್ಲಿ ಐದು ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ.
- ಹಿಮಾಚಲದಲ್ಲಿರುವ ವಕ್ಫ್ ಆಸ್ತಿಗಳ ಸಮೀಕ್ಷೆ.
- 6-12 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸೈಕಲ್, ಉನ್ನತ ಶಿಕ್ಷಣ ಪಡೆಯುತ್ತಿರುವವರಿಗೆ ಸ್ಕೂಟಿ.
- ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ.
- ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ.
- 'ಶಕ್ತಿ' ಕಾರ್ಯಕ್ರಮ ಪ್ರಾರಂಭ. ಇದರ ಅಡಿಯಲ್ಲಿ ಧಾರ್ಮಿಕ ಸ್ಥಳಗಳು ಮತ್ತು ದೇವಾಲಯಗಳ ಸುತ್ತ ಮೂಲಸೌಕರ್ಯ ಮತ್ತು ಸಾರಿಗೆಯನ್ನು ಅಭಿವೃದ್ಧಿಪಡಿಸಲು 10 ವರ್ಷಗಳ ಅವಧಿಯಲ್ಲಿ ₹ 12,000 ಕೋಟಿ ಖರ್ಚು.
- 5,000 ಕೋಟಿ ಹೂಡಿಕೆಯೊಂದಿಗೆ ಎಲ್ಲಾ ಹಳ್ಳಿಗಳಿಗೆ ರಸ್ತೆ ಸಂಪರ್ಕ.
- ಪ್ರಧಾನಮಂತ್ರಿ-ಕಿಸಾನ್ ನಿಧಿ ಯೋಜನೆ ಅಡಿಯಲ್ಲಿ ರೈತರಿಗೆ ವಾರ್ಷಿಕ ₹3,000 ಹೆಚ್ಚುವರಿ ಹಣ.
ಈ ಪ್ರಣಾಳಿಕೆ ಕರಡು ರಚನೆಗೆ ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲು ಪಕ್ಷ ವಿಶೇಷ ಸಮಿತಿಯನ್ನು ರಚಿಸಿತ್ತು. 68 ಸದಸ್ಯ ಬಲದ ಹಿಮಾಚಲ ಪ್ರದೇಶದಲ್ಲಿ ನ.12ರಂದು ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಇದನ್ನೂ ಓದಿ:ಹಿಮಾಚಲ ಪ್ರದೇಶ ಚುನಾವಣೆ: ಬಿಜೆಪಿ - ಕಾಂಗ್ರೆಸ್ಗೆ ಬಂಡಾಯದ ಬಿಸಿ, ತಪ್ಪಿದ ಲೆಕ್ಕಾಚಾರ