ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಗೆ ಸ್ವಪಕ್ಷೀಯ ನಾಯಕರೇ ಶಾಕ್ ನೀಡಿದ್ದಾರೆ. ಉಭಯ ರಾಜ್ಯಗಳಲ್ಲೂ ಪಕ್ಷದ ನಾಲ್ವರು ಪ್ರಮುಖ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಪವನ್ ಕುಮಾರ್ ಕಾಜಲ್ ಹಾಗೂ ಉಪಾಧ್ಯಕ್ಷ ಲಖ್ವಿಂದರ್ ಸಿಂಗ್ ರಾಣಾ ಕೇಸರಿ ಪಕ್ಷದ ಬಾವುಟ ಹಿಡಿದಿದ್ದಾರೆ. ಈ ಇಬ್ಬರೂ ಕೂಡ ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ಕೇಸರಿ ಬಾವುಟ ಹಿಡಿದರು. ಪವನ್ ಮತ್ತು ಲಖ್ವಿಂದರ್ ಇಬ್ಬರೂ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು.
ಈ ಸಂದರ್ಭದಲ್ಲಿ ಸಿಎಂ ಜೈರಾಮ್ ಠಾಕೂರ್ ಮಾತನಾಡಿ, ಪವನ್ ಕುಮಾರ್ ಕಾಜಲ್ ಹಿಂದುಳಿದ ವರ್ಗಗಳ ಪ್ರಬಲ ನಾಯಕರಾಗಿದ್ದಾರೆ. ಇವರ ಸೇರ್ಪಡೆಯಿಂದ ಬಿಜೆಪಿಗೆ ಬಲ ಬಂದಿದೆ ಎಂದು ಹೇಳಿದರು.
ಗುಜರಾತ್ನಲ್ಲೂ ಕಾಂಗ್ರೆಸ್ ತೊರೆದ ಇಬ್ಬರು:ಗುಜರಾತ್ನಲ್ಲೂ ಇಬ್ಬರು ಹಿರಿಯ ನಾಯಕರು ಕಾಂಗ್ರೆಸ್ ತೊರೆದು, ಕಮಲ ಪಾಳಯಕ್ಕೆ ಸೇರ್ಪಡೆಯಾಗಿದ್ದಾರೆ. ನರೇಶ್ ರಾವಲ್ ಮತ್ತು ರಾಜು ಪರ್ಮಾರ್ ಅವರು ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ನೇತೃತ್ವದಲ್ಲಿ ಸೇರ್ಪಡೆಗೊಂಡರು.
ನಂತರ ಮಾತನಾಡಿರುವ ನರೇಶ್ ರಾವಲ್, ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವಕ್ಕೆ ಗುಜರಾತ್ ಮತ್ತು ಗುಜರಾತಿಗಳ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಗೌರವಿಸುವುದಿಲ್ಲ. ಗುಜರಾತಿ ಉದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಬಗ್ಗೆಯೂ ಗೌರವ ಹೊಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಈಗಾಗಲೇ ನೆಲಮಟ್ಟಕ್ಕೆ ಕುಸಿದಿದೆ. ಅದು ಮತ್ತೆ ಪುನಶ್ಚೇತನವಾಗಲು ಸಾಧ್ಯವೇ ಇಲ್ಲ. ಹೀಗಾಗಿಯೇ ನಾನು ಕಾಂಗ್ರೆಸ್ ಬಿಟ್ಟಿರುವೆ. ಕಳೆದ ಎರಡ್ಮೂರು ದಶಕಗಳ ಹಿಂದಿನ ಪಕ್ಷವಾಗಿ ಈಗ ಉಳಿದಿಲ್ಲ. ಕಟಿಬದ್ಧ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೂ ಗೌರವ ಸಿಗುತ್ತಿಲ್ಲ ಎಂದೂ ರಾವಲ್ ಹೇಳಿದರು.
ಇದನ್ನೂ ಓದಿ:ಮೇಕ್ ಇಂಡಿಯಾ ನಂ.1 ಮಿಷನ್ ಘೋಷಿಸಿದ ದೆಹಲಿ ಸಿಎಂ ಕೇಜ್ರಿವಾಲ್