ಶಿಮ್ಲಾ:ನಿರಂತರ ವ್ಯಾಪಕ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಹಿಮಾಚಲಪ್ರದೇಶದಲ್ಲಿ ಈವರೆಗೂ ಪ್ರಕೃತಿ ವಿಕೋಪಕ್ಕೆ 80 ಮಂದಿ ಸಾವನ್ನಪ್ಪಿ, 10 ಮಂದಿ ನಾಪತ್ತೆಯಾಗಿದ್ದಾರೆ. 1050 ಕೋಟಿ ರೂಪಾಯಿಯಷ್ಟು ಆಸ್ತಿಪಾಸ್ತಿ ನಾಶವಾಗಿದೆ. ಇದು 4 ಸಾವಿರ ಕೋಟಿಯಷ್ಟು ತಲುಪಬಹುದು ಎಂದು ಅಂದಾಜಿಸಲಾಗಿದೆ.
ಜೂನ್ 24ರಿಂದ ಮಾನ್ಸೂನ್ ಮಳೆಗೆ ಸಂಬಂಧಿತ ಘಟನೆಗಳಲ್ಲಿ 80 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಶನಿವಾರದಿಂದೀಚೆಗೆ ನಡೆದ ಅವಘಡಗಳಲ್ಲಿ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭೂಕುಸಿತ ಮತ್ತು ಪ್ರವಾಹಕ್ಕೀಡಾಗಿ 1,300 ರಸ್ತೆಗಳು, 40 ಪ್ರಮುಖ ಸೇತುವೆಗಳು ಹಾನಿಗೀಡಾಗಿವೆ. ಸುಮಾರು 1,050 ಕೋಟಿ ರೂ.ಗಳ ಸಂಚಿತ ನಷ್ಟ ಉಂಟಾಗಿದೆ ಎಂದು ಹಿಮಾಚಲ ಪ್ರದೇಶ ವಿಪತ್ತು ನಿರ್ವಹಣಾ ತಂಡ ಮಾಹಿತಿ ನೀಡಿದೆ.
ಮಳೆ ಸಂಬಂಧಿತ ಘಟನೆಗಳಾದ 24 ರಸ್ತೆ ಅಪಘಾತಗಳು, 21 ಭೂಕುಸಿತಗಳು, 12 ಎತ್ತರ ಪ್ರದೇಶದಿಂದ ಬಿದ್ದು, 7 ಆಕಸ್ಮಿಕವಾಗಿ ನೀರಿನಲ್ಲಿ ಮುಳುಗುವಿಕೆ, 5 ಪ್ರವಾಹ, ವಿದ್ಯುತ್ ಅವಘಡ 4, ಹಾವು ಕಡಿತದಿಂದ 5 ಮತ್ತು ಇತರ ಕಾರಣಗಳಿಗಾಗಿ 5 ಮಂದಿ ಸಾವಿಗೀಡಾಗಿದ್ದಾರೆ.
ರಸ್ತೆಗಳಿಗೆ ಹಾನಿ, ಸಂಚಾರ ನಿರ್ಬಂಧ:ಭೂಕುಸಿತ ಮತ್ತು ಪ್ರವಾಹದಿಂದಾಗಿ 1,299 ರಸ್ತೆಗಳಿಗೆ ಹಾನಿಯುಂಟಾಗಿದೆ. ಹೀಗಾಗಿ ಆ ರಸ್ತೆಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಶಿಮ್ಲಾ ಮತ್ತು ಮನಾಲಿಯಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಹೊಡೆತ ಬಿದ್ದಿದೆ. ಚಂಡೀಗಢ-ಮನಾಲಿ ಮತ್ತು ಶಿಮ್ಲಾ-ಕಲ್ಕಾ ರಾಷ್ಟ್ರೀಯ ಹೆದ್ದಾರಿಗಳು ಭೂಕುಸಿತದಿಂದಾಗಿ ಮುಚ್ಚಲ್ಪಟ್ಟಿವೆ. 3,737 ನೀರು ಸರಬರಾಜು ಯೋಜನೆಗಳಿಗೆ ಹಾನಿಯಾಗಿದ್ದು, 79 ಮನೆಗಳು ಸಂಪೂರ್ಣ ಮತ್ತು 333 ಭಾಗಶಃ ಹಾನಿಗೊಳಗಾಗಿವೆ. ಹಿಮಾಚಲ ರಸ್ತೆ ಸಾರಿಗೆ ನಿಗಮದ 1,284 ಮಾರ್ಗಗಳಲ್ಲಿ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಅಂಕಿಅಂಶ ನೀಡಿದ್ದಾರೆ.