ಶಿಮ್ಲಾ( ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ಭೂ ಕುಸಿತಗಳು ವರದಿಯಾಗುತ್ತಲೇ ಇವೆ. ಉತ್ತರ ಭಾರತದ ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರಾಖಂಡ,ಜಮ್ಮು ಕಾಶ್ಮೀರ ಹೀಗೆ ಹಲವು ರಾಜ್ಯಗಳಲ್ಲಿ ಭಾರಿ ಮಳೆ, ಹಾಗೂ ಪ್ರವಾಹಕ್ಕೆ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತಗಳು ವರದಿಯಾಗುತ್ತಲೇ ಇವೆ.
ಜಮ್ಮು ಕಾಶ್ಮೀರದಲ್ಲಿ ಆದ ದೊಡ್ಡ ಭೂ ಕುಸಿತದ ನಂತರ ಹಿಮಾಚಲ ಪ್ರದೇಶದ ರಾಂಪುರ ಉಪವಿಭಾಗದ ಕಿನ್ನು ಪ್ರದೇಶದಲ್ಲಿ ಭಾರಿ ಪ್ರಮಾಣದ ಭೂ ಕುಸಿತ ಉಂಟಾಗಿದೆ. ಈ ಪರಿಣಾಮ ಮಂಗ್ಲಾದ್- ಬಗ್ವತ್ ರಸ್ತೆಯನ್ನು ಭಾನುವಾರ ಮುಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರಿ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದ್ದು, ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ರಾಂಪುರ ಉಪವಿಭಾಗದ ಕಿನ್ನು ಪ್ರದೇಶದಲ್ಲಿ ಭೂಕುಸಿತದ ವಿಡಿಯೋ ಕ್ಲಿಪ್ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಭೂ ಕುಸಿತ ಸಂಭವಿಸಿದ ಪ್ರದೇಶದಲ್ಲಿ ಬಂಡೆಗಳು ಕಣಿವೆಗೆ ಬೀಳುತ್ತಿರುವುದನ್ನು ಕಾಣಬಹುದಾಗಿದೆ. ಸ್ಥಳೀಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ದೃಶ್ಯಗಳನ್ನು ಲೈವ್ ಆಗಿ ರೆಕಾರ್ಡ್ ಮಾಡಿದ್ದಾರೆ. ಶಿಮ್ಲಾ ಜಿಲ್ಲೆಯ ರಾಮ್‌ಪುರ ಉಪವಿಭಾಗದ ಕಿನ್ನು ಪ್ರದೇಶದಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ದಿಢೀರ್ ಭೂಕುಸಿತದ ಹಿನ್ನೆಲೆ ರಸ್ತೆ ಸಂಪರ್ಕ ಬಂದ್ ಆಗಿದ್ದು, ಅಲ್ಲಿಗೆ ರಕ್ಷಣಾ ಪಡೆಗಳು ಧಾವಿಸಿವೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.