ಶಿಮ್ಲಾ, ಹಿಮಾಚಲ ಪ್ರದೇಶ: ರಾಜ್ಯದಲ್ಲಿ ಮಳೆ ಮತ್ತೊಮ್ಮೆ ಅವಾಂತರ ಸೃಷ್ಟಿಸಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಜ್ಯದ ವಿವಿಧೆಡೆ ಭೂಕುಸಿತ ಮತ್ತು ಭಾರೀ ಹಾನಿ ಆಗಿರುವುದರ ಬಗ್ಗೆ ವರದಿಯಾಗಿದೆ. ರಾಜಧಾನಿ ಶಿಮ್ಲಾದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಶಿವನ ದೇವಾಲಯವೂ ಭೂ ಕುಸಿತದ ಹಿಡಿತಕ್ಕೆ ಒಳಗಾಗಿದೆ. ಪರಿಣಾಮ ಸುಮಾರು 30ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿರುವ ಭಯವಿದೆ. ಸ್ಥಳೀಯ ಆಡಳಿತವು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಇದುವರೆಗೆ 9 ಜನರ ಮೃತದೇಹಗಳನ್ನು ಹೊರತೆಗೆದಿದೆ.
ಸುಮಾರು 30ಕ್ಕೂ ಹೆಚ್ಚು ಜನರ ಸಾವು ಶಂಕೆ:ಸೋಮವಾರ ಬೆಳಗ್ಗೆ ಶಿವನ ದೇವಸ್ಥಾನವೊಂದು ಭೂಕುಸಿತಕ್ಕೆ ಒಳಗಾಗಿರುವ ಘಟನೆ ಶಿಮ್ಲಾದ ಸಮ್ಮರ್‌ಹಿಲ್ ಪ್ರದೇಶದಲ್ಲಿ ಕಂಡು ಬಂದಿದೆ. ದೇವಾಲಯ ಕುಸಿತಗೊಂಡ ಪರಿಣಾಮ, ಈ ಮೊದಲು ಅವಶೇಷಗಳಡಿ ಸುಮಾರು 30 ಮಂದಿ ಸಿಲುಕಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿತ್ತು. ಸೋಮವಾರ ಆಗಿದ್ದ ಕಾರಣ ದೇವಸ್ಥಾನದಲ್ಲಿ ಶಿವನ ಭಕ್ತರ ದಂಡೇ ಇತ್ತು ಎಂದು ಹೇಳಲಾಗುತ್ತಿದೆ.
ಭರದಿಂದ ಸಾಗಿದ ರಕ್ಷಣಾ ಕಾರ್ಯ: ಭೂಕುಸಿತಗೊಂಡ ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡಿದ್ದರು. ಬಳಿಕ ಈ ಮಾಹಿತಿಯನ್ನು ಸ್ಥಳೀಯ ಆಡಳಿತಕ್ಕೆ ರವಾನಿಸಲಾಗಿತ್ತು. ಸುದ್ದಿ ತಿಳಿದ ಸ್ಥಳೀಯ ಆಡಳಿತ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ನಡೆಯುತ್ತಿದ್ದು, ಇಲ್ಲಿಯವರೆಗೆ 15 ಜನರನ್ನು ರಕ್ಷಿಸಲಾಗಿದೆ ಮತ್ತು ಎಲ್ಲರನ್ನೂ ಚಿಕಿತ್ಸೆಗಾಗಿ ಐಜಿಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಎಎಸ್ಪಿ ಸುನೀಲ್ ನೇಗಿ ತಿಳಿಸಿದ್ದಾರೆ.