ಶಿಮ್ಲಾ(ಹಿಮಾಚಲ ಪ್ರದೇಶ): ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯ ಜೈರಾಮ್ ಠಾಕೂರ್ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಇಂದು ಸಂಜೆ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು.
ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ 40 ಸ್ಥಾನಗಳನ್ನು ಗೆಲ್ಲುವ ಮೂಲಕ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. 68 ಸದಸ್ಯ ಬಲದ ವಿಧಾನಸಭೆಯಲ್ಲಿ ಕೈ ಪಕ್ಷವು ಅರ್ಧಕ್ಕಿಂತ (34) ಆರು ಸ್ಥಾನಗಳನ್ನು ಹೆಚ್ಚು ಗೆದ್ದಿದೆ. ಆಡಳಿತದಲ್ಲಿದ್ದ ಬಿಜೆಪಿ 44 ರಿಂದ 25 ಸ್ಥಾನಗಳಿಗೆ ಕುಸಿದು ಅಧಿಕಾರ ಕಳೆದುಕೊಂಡಿತು.
ಜನಾದೇಶ ಗೌರವಿಸುತ್ತೇವೆ- ಠಾಕೂರ್: ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಗಮಿತ ಸಿಎಂ ಠಾಕೂರ್, ಜನಾದೇಶವನ್ನು ಗೌರವಿಸುತ್ತೇವೆ. ಕಳೆದ ಐದು ವರ್ಷಗಳ ಅಧಿಕಾರ ನಡೆಸಲು ಅವಕಾಶ ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದರು.