ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ನಿಯೋಜಿತ ಮುಖ್ಯಮಂತ್ರಿಯಾದ ಕಾಂಗ್ರೆಸ್ ನಾಯಕ ಸುಖ್ವಿಂದರ್ ಸಿಂಗ್ ಸುಖು ಹಾಗೂ ಇತರ ಕಾಂಗ್ರೆಸ್ ಮುಖಂಡರು ಮಾಜಿ ಮುಖ್ಯಮಂತ್ರಿಯಾದ ಬಿಜೆಪಿ ನಾಯಕ ಜೈರಾಮ್ ಠಾಕೂರ್ ಅವರನ್ನು ಭೇಟಿ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ಸರ್ಕಾರ ರಚನೆಗೆ ಸಜ್ಜಾಗಿದೆ. ಭಾನುವಾರ ಮುಂದಿನ ಮುಖ್ಯಮಂತ್ರಿ ಆಗಿ ಸುಖ್ವಿಂದರ್ ಸಿಂಗ್ ಸುಖು ಪದಗ್ರಹಣ ಮಾಡಲಿದ್ದಾರೆ. ಜೊತೆಗೆ ಮತ್ತೊಬ್ಬ ನಾಯಕ ಮುಖೇಶ್ ಅಗ್ನಿಹೋತ್ರಿ ಅವರನ್ನು ಉಪ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಇದರ ಬೆನ್ನಲ್ಲೇ ನಿಗರ್ಮಿತ ಮುಖ್ಯಮಂತ್ರಿಯಾದ ಜೈರಾಮ್ ಠಾಕೂರ್ ಅವರ ನಿವಾಸಕ್ಕೆ ಸುಖ್ವಿಂದರ್ ಸಿಂಗ್ ಸುಖು ಹಾಗೂ ಮುಖೇಶ್ ಅಗ್ನಿಹೋತ್ರಿ ತೆರಳಿದ್ದರು. ಇವರೊಂದಿಗೆ ಎಐಸಿಸಿ ವೀಕ್ಷಕರಾದ ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್ ಹಾಗೂ ಹಿಮಾಚಲ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ ಕೂಡ ಜೈರಾಮ್ ಠಾಕೂರ್ ನಿವಾಸಕ್ಕೆ ತೆರಳಿರುವುದು ಅಚ್ಚರಿಯನ್ನು ಉಂಟು ಮಾಡಿದೆ.