ಶಿಮ್ಲಾ, ಹಿಮಾಚಲ ಪ್ರದೇಶ:ಪಶ್ಚಿಮ ವಾಯು ಕಮಾಂಡ್‌ಗೆ ಸೇರಿದ ಹೆಲಿಕಾಪ್ಟರ್‌ಗಳು ಕಳೆದ 48 ಗಂಟೆಗಳಲ್ಲಿ 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ರಕ್ಷಣಾ ಕಾರ್ಯ ಕೈಗೊಂಡಿದ್ದು, ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ 780ಕ್ಕೂ ಹೆಚ್ಚು ಜನರನ್ನು ರಕ್ಷಿಸಿವೆ. ಈ ಬಗ್ಗೆ ಭಾರತೀಯ ವಾಯುಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಂಗ್ ಅಣೆಕಟ್ಟಿನಿಂದ ನೀರು ಬಿಡುಗಡೆ, ಪ್ರವಾಹದ ಭೀತಿ:ಪಾಂಗ್ ಅಣೆಕಟ್ಟಿನ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆ ಡ್ಯಾಂನಿಂದ ನೀರು ಬಿಡಲಾಯಿತು. ಇದರಿಂದಾಗಿ ಪಾಂಗ್ ಪಕ್ಕದ ಫತೇಪುರ್ ಮತ್ತು ಇಂಡೋರಾದಲ್ಲಿ ಪ್ರವಾಹದಂತಹ ಪರಿಸ್ಥಿತಿಗಳು ನಿರ್ಮಾಣವಾದವು. ಆ ಸ್ಥಳಗಳಲ್ಲಿ ಸಿಕ್ಕಿಬಿದ್ದ ಜನರನ್ನು ಸುರಕ್ಷಿತವಾಗಿ ಹೊರತರಲು ಎನ್‌ಡಿಆರ್‌ಎಫ್ ಜೊತೆ ಭಾರತೀಯ ಸೇನೆ ಮತ್ತು ವಾಯುಸೇನೆ ಕೈ ಜೋಡಿಸಿದೆ.
ಕಂಗ್ರಾ ಜಿಲ್ಲೆಯ ಫತೇಪುರ್ನಲ್ಲಿ ನಡೆಯುತ್ತಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಕುರಿತು ಮಾತನಾಡಿದ ಕಂಗ್ರಾದ ಡೆಪ್ಯುಟಿ ಕಮಿಷನರ್ ನಿಪುನ್ ಜಿಂದಾಲ್ ಅವರು, ಆಗಸ್ಟ್ 15 ರಿಂದ ಒಟ್ಟು 800 ಜನರನ್ನು ರಕ್ಷಿಸಲಾಗಿದೆ. ಎನ್‌ಡಿಆರ್‌ಎಫ್, ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯಿಂದ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿವೆ. ಇದುವರೆಗೆ ರಕ್ಷಿಸಲ್ಪಟ್ಟ ಜನರಿಗೆ ಅಗತ್ಯ ಇರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಅವರಿಗಾಗಿ ಪರಿಹಾರ ಶಿಬಿರಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಬುಧವಾರದಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಕಾಂಗ್ರಾ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಪಾಂಗ್ ಜಲಾಶಯದ ಕೆಳಭಾಗದ ಪ್ರವಾಹದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಗಳನ್ನು ಪರಿಶೀಲಿಸಿದರು. ದಮ್ಟಾಲ್ ಮತ್ತು ಶೇಖ್ಪುರದಲ್ಲಿ ಪರಿಹಾರ ಶಿಬಿರಗಳಲ್ಲಿ ಜನರೊಂದಿಗೆ ಸಿಎಂ ಸಂವಾದ ನಡೆಸಿದರು. ಈ ವೇಳೆ, ಸಿಎಂ ಅವರು ಸಂತ್ರಸ್ತರ ಯೋಗಕ್ಷೇಮವನ್ನು ವಿಚಾರಿಸಿದರು. ಅವರಿಗೆ ಸರ್ಕಾರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಸಿಎಂ ಭರವಸೆ ನೀಡಿದರು.
ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಆಗಿರುವ ಜೀವಹಾನಿ, ವಸ್ತು ಹಾನಿಯಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಅಪಾರ ಹಾನಿಯಾಗಿದೆ. ಹಲವಾರು ಸ್ಥಳೀಯರ ಮನೆಗಳು ಕೊಚ್ಚಿಕೊಂಡು ಹೋಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಕೊಯ್ಲಿನ ವಿಶಾಲವಾದ ಪ್ರದೇಶಗಳು ಜಲಾವೃತಗೊಂಡಿವೆ. ಇದು ರೈತರಿಗೆ ಹೇಳಲಾಗದ ನಷ್ಟಕ್ಕೆ ಕಾರಣವಾಗಿದೆ ಎಂದು ಸಿಎಂ ಸುಖು ಅವರು ಕಳವಳ ವ್ಯಕ್ತಪಡಿಸಿದರು
ಉಚಿತ ವಸತಿ ಮತ್ತು ಬೋರ್ಡಿಂಗ್ ಒದಗಿಸುವುದರ ಜೊತೆಗೆ ಆರೋಗ್ಯ ಇಲಾಖೆಯು ಮಕ್ಕಳು, ಹಿರಿಯರ ಆರೈಕೆಗಾಗಿ ವೈದ್ಯಕೀಯ ತಂಡಗಳನ್ನು ನಿಯೋಜಿಸಿದೆ. ಆಗಸ್ಟ್ 13 ರಿಂದ15 ರವರೆಗಿನ ನಿರಂತರ ಮಳೆಯಿಂದಾಗಿ ಇಲ್ಲಿಯವರೆಗೆ ಒಟ್ಟು 71 ಜೀವಗಳು ಬಲಿಯಾಗಿವೆ. ಈ ಮಾನ್ಸೂನ್ನಿಂದಾಗಿ ರಾಜ್ಯಕ್ಕೆ ಸುಮಾರು 7,500 ಕೋಟಿ ನಷ್ಟ ಉಂಟು ಮಾಡಿದೆ ಎಂದು ಅಂದಾಜಿಸಲಾಗಿದೆ ಅಂತಾ ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಓಂಕಾರ್ ಚಂದ್ ಶರ್ಮಾ ಮಾಹಿತಿ ನೀಡಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ವಾಯು ಸೇನೆ ನಾಗರಿಕರನ್ನು ರಕ್ಷಿಸುವಲ್ಲಿ ಶ್ರಮಿಸುತ್ತಿದೆ.
ಓದಿ:ಹಿಮಾಚಲಪ್ರದೇಶದಲ್ಲಿ ಮೇಘಸ್ಫೋಟ, ಒಂದೇ ಕುಟುಂಬದ ಐವರು ನಾಪತ್ತೆ, ಮತ್ತೆ ಪ್ರವಾಹ ಪರಿಸ್ಥಿತಿ: ವಿಡಿಯೋ