ರಾಯಗಢ:ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ರಾಯಗಢ ಜಿಲ್ಲೆಯ ಖಲಾಪುರ್ ತಾಲೂಕಿನ ಇರ್ಶಲವಾಡಿ ಗ್ರಾಮದಲ್ಲಿ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಭಾರಿ ಭೂಕುಸಿತ ಉಂಟಾಗಿದೆ. ಗ್ರಾಮದ 30 ಮನೆಗಳು ಅವಶೇಷಗಳಡಿ ಸಿಲುಕಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 100 ಜನರು ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಸದ್ಯ 25 ಮಂದಿ ರಕ್ಷಣೆ ಮಾಡಲಾಗಿದೆ. ವಿಷಯ ತಿಳಿದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು, ಪೊಲೀಸರು ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ಭೂಕುಸಿತದಲ್ಲಿ ಗಾಯಗೊಂಡ 20ಕ್ಕೂ ಹೆಚ್ಚು ಮಂದಿಯನ್ನು ನವಿ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮ ಬೆಟ್ಟದ ಅಡಿಯಿರುವ ಕಾರಣ ಈ ದುರಂತ ಸಂಭವಿಸಿದೆ. ಕನಿಷ್ಠ 100 ಜನರು ಸಿಕ್ಕಿಬಿದ್ದಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಂ, ಸಚಿವರ ಭೇಟಿ:ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಸಚಿವರಾದ ಉದಯ್ ಸಾಮಂತ್, ಗಿರೀಶ್ ಮಹಾಜನ್ ಮತ್ತು ದಾದಾ ಭೂಸೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಸಚಿವರು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ.
ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯ:ಈ ವೇಳೆ ಮಾತನಾಡಿದ ಸಿಎಂ ಏಕನಾಥ್ ಶಿಂಧೆ, ಎರಡು ಬೆಟ್ಟಗಳ ನಡುವೆ ಈ ಗ್ರಾಮವಿದೆ. ಹೀಗಾಗಿ ಮಣ್ಣು ಕುಸಿದು ಮನೆಗಳ ಮೇಲೆ ಬಿದ್ದಿದೆ. ರಕ್ಷಣಾ ತಂಡಗಳು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಿಕ್ಕಿಬಿದ್ದವರ ಜೀವ ಉಳಿಸುವ ಎಲ್ಲ ಪ್ರಯತ್ನಗಳು ಸಾಗಿವೆ. ಭಾರತೀಯ ವಾಯುಪಡೆಯ (IAF) ಸಹಾಯವನ್ನೂ ಕೋರಲಾಗುವುದು. ಎರಡು ಹೆಲಿಕಾಪ್ಟರ್‌ಗಳು ಸಿದ್ಧವಾಗಿವೆ. ಮಳೆ, ಕೆಟ್ಟ ಹವಾಮಾನ ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟು ಮಾಡುತ್ತಿದೆ ಎಂದು ಹೇಳಿದರು.
ಬೆಟ್ಟ ಗುಡ್ಡದ ಮಧ್ಯೆ ಇರುವ ಕಾರಣ ಅಲ್ಲಿಗೆ ತೆರಳಲು ಕಷ್ಟವಾಗುತ್ತಿದೆ. ಅಲ್ಲಿಗೆ ಯಾವುದೇ ವಾಹನಗಳು ಹೋಗಲು ಸಾಧ್ಯವಿಲ್ಲ. ಇದು ಕೂಡ ಕಾರ್ಯಾಚರಣೆಗೆ ಸವಾಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನಮ್ಮೊಂದಿಗೆ ಈ ಬಗ್ಗೆ ಚರ್ಚಿಸಿ, ಎಲ್ಲ ನೆರವಿನ ಭರವಸೆ ನೀಡಿದ್ದಾರೆ ಎಂದು ಸಿಎಂ ಶಿಂಧೆ ಹೇಳಿದರು.
ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಮುಂಬೈನಲ್ಲಿನ ತುರ್ತು ನಿಯಂತ್ರಣ ಕೊಠಡಿಯಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನುಪರಿಶೀಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ರಾಯಗಡ ಜಿಲ್ಲೆ ಕೊಂಕಣ ಪ್ರದೇಶದಲ್ಲಿ ಬರುತ್ತದೆ.
ಇದನ್ನೂ ಓದಿ:ರೈಲಿನಿಂದ ಇಳಿಯುವಾಗ ಅಚಾನಕ್ ಮೋರಿಗೆ ಬಿದ್ದ 4 ತಿಂಗಳ ಹಸುಗೂಸು; ಕರುಳುಹಿಂಡುವ ತಾಯಿಯ ಆಕ್ರಂದನ