ನವದೆಹಲಿ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಕರ್ನಾಟಕದ ಹಿಜಾಬ್ ಪ್ರಕರಣದ ವಿಚಾರಣೆ ಮುಂದುವರೆದಿದೆ. ಸರ್ವೋಚ್ಛ ನ್ಯಾಯಾಲಯದಲ್ಲಿ ಇಂದೂ ಸಹ ರಾಜ್ಯ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಲಿದ್ದಾರೆ. ಆದರೆ, ನಿನ್ನೆಯ ದಿನ ಕೋರ್ಟ್‌ನಲ್ಲಿ ಏನೆಲ್ಲ ನಡೀತು ಎಂಬುದರ ವಿವರ ಇಲ್ಲಿದೆ.
ಸರ್ಕಾರದ ಪರ ವಕೀಲ ತುಷಾರ್ ಮೆಹ್ತಾ ವಾದ: ಹಿಜಾಬ್ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ. ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಮಹಿಳೆಯರು ಅದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇಸ್ಲಾಂನಲ್ಲಿ ಹಿಜಾಬ್ ಕಡ್ಡಾಯವಾಗಿರುವ ಧಾರ್ಮಿಕ ಆಚರಣೆಯೂ ಅಲ್ಲ. ಕುರಾನ್ನಲ್ಲಿ ಕೇವಲ ಉಲ್ಲೇಖವಿದೆಯಷ್ಟೇ. ಆದರೆ, ಅತ್ಯಗತ್ಯವೆಂದು ಎಲ್ಲಿಯೂ ಹೇಳಿಲ್ಲ. 2021ರ ತನಕ ಯಾವುದೇ ಹೆಣ್ಣು ಮಕ್ಕಳು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿರಲಿಲ್ಲ. ಆದರೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಆರಂಭಿಸಿದ ಸಾಮಾಜಿಕ ಮಾಧ್ಯಮ ಆಂದೋಲನದಿಂದ ಈ ವಿವಾದ ಸೃಷ್ಟಿಯಾಗಿದೆ ಎಂದು ಕರ್ನಾಟಕ ಸರ್ಕಾರದ ಪರ ವಕೀಲ ತುಷಾರ್ ಮೆಹ್ತಾ ವಾದ ಮಂಡಿಸಿದರು.