ಕರ್ನಾಟಕ

karnataka

ETV Bharat / bharat

ಹಿಜಾಬ್​ ವಿವಾದ: 17 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿದಿದ್ದಾರೆ ಎಂದ ವಕೀಲ ಅಹ್ಮದಿ..ನಾಳೆಯೂ ವಿಚಾರಣೆ

ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಹಿಜಾಬ್​​ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್​​​ನಲ್ಲಿ ಐದನೇ ದಿನವೂ ನಡೆದಿದ್ದು, ಈ ವೇಳೆ ಹಿಂಜಾಬ್​ ನಿಷೇಧದ ಬಳಿಕ ವಿದ್ಯಾರ್ಥಿಗಳು ತರಗತಿಗಳು ಮತ್ತು ಪರೀಕ್ಷೆಯಿಂದ ದೂರ ಉಳಿಯುತ್ತಿರುವ ಬಗ್ಗೆ ನ್ಯಾಯಪೀಠದ ಗಮನ ಸೆಳೆಯುವ ಪ್ರಯತ್ನವನ್ನು ವಕೀಲರು ಮಾಡಿದರು.

Hijab Ban case
Hijab Ban case

By

Published : Sep 14, 2022, 12:11 PM IST

Updated : Sep 14, 2022, 7:28 PM IST

ನವದೆಹಲಿ: ದೇಶದಲ್ಲಿ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿರುವ ಹಿಜಾಬ್​ ನಿಷೇಧ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ಬುಧವಾರ ಕೂಡ ವಿಚಾರಣೆ ನಡೆಯಿತು. ಹಿಜಾಬ್​ ನಿಷೇಧ ಪ್ರಶ್ನಿಸಿ ಸುಪ್ರೀಂಕೋರ್ಟ್​​​ ಮೆಟ್ಟಿಲೇರಿರುವ ಮುಸ್ಲಿಂ ಅರ್ಜಿದಾರರ ಪರ ಮೂವರು ವಕೀಲರು ಈಗಾಗಲೇ ವಾದ ಮುಗಿಸಿದ್ದಾರೆ. ಇಂದು ವಕೀಲರಾದ ಆದಿತ್ಯ ಸೋಂದಿ ಮತ್ತು ಹುಝೆಫಾ ಅಹ್ಮದಿ ವಾದ ಮಂಡಿಸಿದರು.

ಸುಪ್ರೀಂಕೋರ್ಟ್​​ ನ್ಯಾಯಮೂರ್ತಿ ಹೇಮಂತ್ ಗುಪ್ತಾ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಲಾಗ್ತಿದ್ದು, ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ವಾದ ಪ್ರತಿವಾದ ಆಲಿಸಿದರು.

ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಹಿನ್ನೆಲೆ ಬಗ್ಗೆ ನ್ಯಾಯಾಲಯ ಪರಿಗಣಿಸಬೇಕಾಗಿದೆ ಎಂದು ವಕೀಲರಾದ ಆದಿತ್ಯ ಸೋಂಧಿ ಹೇಳಿದ್ದು, ವಿದ್ಯಾರ್ಥಿನಿಯರು ನಂಬಿಕೆಯನ್ನು ಗೌರವಿಸಬೇಕೆ ಅಥವಾ ಶಿಕ್ಷಣವನ್ನು ಪಡೆಯಬೇಕೆ ಎಂಬ ಎರಡು ಆಯ್ಕೆಗಳಿಂದ ವಿಚಲಿತರಾಗಿದ್ದಾರೆ. ಈ ವಿಷಯದಲ್ಲಿ ಸರ್ವೋಚ್ಛ ನ್ಯಾಯಾಲಯ ಮಹತ್ವದ ತೀರ್ಪು ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಸಿಖ್​ ಮಹಿಳೆಯ ಶಿರವಸ್ತ್ರದಂತೆ, ಹಿಜಾಬ್ ಕೂಡ ಮುಖ್ಯ: ಅರ್ಜಿದಾರರ ಪರ ವಕೀಲರ ವಾದ

ಎಲ್ಲ ವ್ಯಕ್ತಿಗಳ ಗೌರವ, ಘನತೆ ಮತ್ತು ಖಾಸಗಿತನಕ್ಕೆ ಗೌರವ ನೀಡಬೇಕು. ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದರಿಂದ ತಾರತಮ್ಯ ಎದುರಿಸುವಂತಾಗಿದೆ. ಇದರಿಂದ ಕಾರ್ಪೋರೇಟ್​​​ ಕ್ಷೇತ್ರದಲ್ಲಿ ಕೆಲಸ ಹುಡುಕುವುದು ಸಹ ಕಷ್ಟವಾಗಿದೆ. ಅಂಗಡಿಗಳಿಗೆ ತೆರಳಿದಾಗ ಅವರೊಂದಿಗೆ ಅಸಭ್ಯವಾಗಿ ವರ್ತಿಸಲಾಗ್ತಿದೆ ಎಂದು ವಾದ ಮಂಡಿಸಿದರು. ಕೇವಲ ಹಿಜಾಬ್​ ಹಾಕಿಕೊಂಡಿದ್ದಾರೆಂಬ ಕಾರಣಕ್ಕಾಗಿ ಧರ್ಮ ಮತ್ತು ಉಡುಪಿನ ಆಧಾರದ ಮೇಲೆ ತಾರತಮ್ಯ ಮಾಡುವುದು ಸರಿಯಲ್ಲ ಎಂದರು.

ಇದು ಒಂದು ಕಡೆ ನಡೆಯುತ್ತಿದೆಯಾ ಎಲ್ಲ ಕಡೆ ಆಗ್ತಿದೆಯಾ?:ಈ ವೇಳೆ ಮಧ್ಯಪ್ರವೇಶ ಮಾಡಿರುವ ನ್ಯಾಯಮೂರ್ತಿ ಧುಲಿಯಾ, ಇದು ಕೇವಲ ಒಂದು ಶಾಲೆಯಲ್ಲಿ ನಡೆಯುತ್ತಿರುವುದೇ ಅಥವಾ ಎಲ್ಲ ಶಾಲೆಗಳಲ್ಲೂ ನಡೆಯುತ್ತಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಾತನಾಡಿರುವ ಕಕ್ಷಿದಾರರ ಪರ ವಕೀಲ ರಾಜೀವ್ ಧವನ್, ಲಿಂಗ ಮತ್ತು ತಾನು ಧರಿಸುವ ಬಟ್ಟೆಯ ಆಧಾರದ ಮೇಲೆ ತಾರತಮ್ಯ ಮಾಡಲಾಗ್ತಿದ್ದು, ಇದರಿಂದ ವಿದ್ಯಾರ್ಥಿನಿಯರಿಗೆ ಯಾವುದೇ ರೀತಿಯ ಹಕ್ಕಿಲ್ಲ ಎಂದು ತೋರಿಸಿ ಕೊಡಲಾಗ್ತಿದೆ ಎಂದು ಹೇಳಿದರು.

ಹಲವು ಪುರಾವೆಗಳು ನಮ್ಮ ಕಣ್ಮುಂದೆ ಇವೆ:ಕೇಂದ್ರ ವಿದ್ಯಾಲಯ ಹಿಜಾಬ್​ ಹಾಕಿಕೊಳ್ಳಲು ಅನುಮತಿ ನೀಡುತ್ತದೆ. ಆದರೆ, ಕಾಲೇಜ್​, ಶಾಲೆಗಳಲ್ಲಿ ಮಾತ್ರ ಇದಕ್ಕೆ ವಿರೋಧವೇಕೆ? ಎಂದು ವಕೀಲ ಧವನ್​ ಪ್ರಶ್ನೆ ಮಾಡಿದರು. ಪ್ರಪಂಚದಾದ್ಯಂತ ಹಿಜಾಬ್​ ಹಾಕಿಕೊಳ್ಳಲು ಅನುಮತಿ ನೀಡಲಾಗಿದೆ. ಅದನ್ನ ಸಾಬೀತುಪಡಿಸುವ ಅನೇಕ ಪುರಾವೆಗಳು ನಮ್ಮ ಕಣ್ಮುಂದೆ ಇವೆ.

ಈ ಹಿಂದೆ ಕೀನ್ಯಾದಲ್ಲಿ ಹಿಜಾಬ್​​ ರದ್ದುಗೊಳಿಸುವ ಪ್ರಯತ್ನ ನಡೆಸಲಾಗಿತ್ತು. ಆದರೆ, ಅದು ಅಸಾಂವಿಧಾನಿಕ ಎಂದು ನ್ಯಾಯಾಲಯ ಪರಿಗಣಿಸಿತ್ತು ಎಂದು ಧವನ್ ತಿಳಿಸಿದರು. 1993ರಲ್ಲಿ ಶಿಕ್ಷಣ ನೀತಿ ಅನುಸಾರದ ಮೇಲೆ ವಸ್ತ್ರಸಂಹಿತೆ ಸಹ ಜಾರಿಗೊಳಿಸಲಾಗಿದೆ. ಇದೀಗ ಈ ನೀತಿಯಲ್ಲಿ ಬದಲಾವಣೆ ಮಾಡಲು ಮುಂದಾಗಿರುವುದು ಯಾಕೆ? ಹಿಜಾಬ್ ತೆಗೆದು ಹಾಕಲು ಇಂದಿನ ಅಧಿಕಾರಿಗಳು ನಿರ್ಧಾರ ಕೈಗೊಂಡಿವುದು ಯಾಕೆ ಎಂಬ ಪ್ರಶ್ನೆ ಮಾಡಿ ತಮ್ಮ ವಾದ ಮುಕ್ತಾಯಗೊಳಿಸಿದರು. ಇದರ ಬೆನ್ನಲ್ಲೇ ವಿಚಾರಣೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ ಮಾಡಲಾಯಿತು.

ಇದಾದ ಮತ್ತೆ 2 ಗಂಟೆಗೆ ವಿಚಾರಣೆ ಆರಂಭವಾಯಿತು. ಈ ವೇಳೆ ವಾದ ಮಂಡಿಸಿ ಹಿರಿಯ ವಕೀಲ ಹುಝೆಫಾ ಅಹ್ಮದಿ ವಾದ ಮಂಡಿಸಿ, ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ದ್ವೇಷ ಹಾಗೂ ಕಿರುಕುಳವನ್ನು ಎದುರಿಸುತ್ತಿದ್ದಾರೆ. ಮೊದಲು ಸ್ನೇಹದಿಂದಿದ್ದ ನೆರೆಹೊರೆಯವರು ಹಗೆತನ ತೋರಿಸಲಾರಂಭಿಸಿದ್ಧಾರೆ ಎಂದರು. ಅಲ್ಲದೇ, ತರಗತಿ ಮತ್ತು ಪರೀಕ್ಷೆಗಳಿಂದ ವಿದ್ಯಾರ್ಥಿಗಳು ದೂರ ಉಳಿಯುತ್ತಿದ್ದಾರೆ ಎಂದು ನ್ಯಾಯಾಲಯದ ಗಮನ ಸೆಳೆಯಲು ಯತ್ನಿಸಿದರು.

ನಿಮ್ಮ ಬಳಿ ಅಂಕಿ- ಅಂಶ ಇದೆಯಾ?:ಆಗ ನ್ಯಾಯಮೂರ್ತಿ ಧುಲಿಯಾ ಅವರು, ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗುವ ಅಧಿಕೃತ ಅಂಕಿ ಅಂಶಗಳನ್ನು ನೀವು ಹೊಂದಿದ್ದೀರಾ ಪ್ರಶ್ನಿಸಿದರು. ಆಗ ವಕೀಲ ಅಹ್ಮದಿ, 17 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿದಿದ್ದಾರೆ ಎಂದು ನನ್ನ ಸ್ನೇಹಿತರೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು. ಇದನ್ನು ಸಂಪೂರ್ಣವಾಗಿ ಸಾಮಾನ್ಯ ಸಂವೇದನಾ ದೃಷ್ಟಿಕೋನದಿಂದ ತೆಗೆದುಕೊಳ್ಳಿ, ಇವರು ಸಂಪ್ರದಾಯವಾದಿ ಕುಟುಂಬಗಳ ವಿದ್ಯಾರ್ಥಿಗಳು ಎಂದು ತಿಳಿಸಿದರು.

ನಾಳೆಯೂ ಮುಂದುವರೆಯಲಿದೆ ವಿಚಾರಣೆ:ಇದಾದ ನಂತರವೂ ವಾದವನ್ನು ಆಲಿಸಿದರ ನ್ಯಾಯ ಪೀಠವು ನಾವು ಎಲ್ಲ ವಕೀಲರಿಗೆ ಹದಿನೈದು ನಿಮಿಷಗಳನ್ನು ನೀಡುತ್ತೇವೆ. ನಾಳೆಯ ದಿನದ ಅಂತ್ಯದೊಳಗೆ ವಾದ ಪೂರ್ಣಗೊಳಿಸಿ ಎಂದು ಹೇಳಿ ನಾಳೆಗೆ ವಿಚಾರಣೆಯನ್ನು ಮುಂದೂಡಿಕೆ ಮಾಡಿತು. ನಾಳೆ ಆರನೇ ದಿನವು ವಿಚಾರಣೆ ನಡೆಯಲಿದೆ.

Last Updated : Sep 14, 2022, 7:28 PM IST

ABOUT THE AUTHOR

...view details