ಕರ್ನಾಟಕ

karnataka

ETV Bharat / bharat

Hijab: ಆಪರೇಷನ್​ ಥಿಯೇಟರ್‌ನೊಳಗೆ ಹಿಜಾಬ್‌ ಧರಿಸಲು ಅವಕಾಶವಿಲ್ಲ: ಕೇರಳ ವಿದ್ಯಾರ್ಥಿನಿಯರ ಬೇಡಿಕೆ ತಿರಸ್ಕೃತ

ಜೂನ್​ 26ರಂದು ನಾಲ್ಕು ಬ್ಯಾಚ್​ನ ವಿದ್ಯಾರ್ಥಿಯರು ಸಹಿ ಮಾಡಿದ ಪತ್ರದಲ್ಲಿ ಆಪರೇಷನ್​ ಥಿಯೇಟರ್‌​ ಒಳಗೂ ಹಿಜಾಬ್​ ಧರಿಸಲು ಅವಕಾಶ ನೀಡುವಂತೆ ಕಾಲೇಜು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದರು.

IMA Kerala unit rejected the demand of students
ವಿದ್ಯಾರ್ಥಿನಿಯರ ಬೇಡಿಕೆ ತಿರಸ್ಕರಿಸಿದ ಐಎಂಎ ಕೇರಳ ಘಟಕ

By

Published : Jun 29, 2023, 5:01 PM IST

ತಿರುವನಂತಪುರಂ: ಆಪರೇಷನ್ ಥಿಯೇಟರ್‌ ಒಳಗೂ ಹಿಜಾಬ್ ಧರಿಸಲು ಅನುಮತಿ ನೀಡಬೇಕು ಎಂದು ತಿರುವನಂತಪುರಂ ವೈದ್ಯಕೀಯ ಕಾಲೇಜಿನ 7 ಮಂದಿ ಎಂಬಿಬಿಎಸ್ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಬೇಡಿಕೆಯನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಕೇರಳ ಘಟಕ ಇಂದು ಸ್ಪಷ್ಟವಾಗಿ ತಿರಸ್ಕರಿಸಿದೆ.

ಈ ಬಗ್ಗೆ ಮಾತನಾಡಿದ ಐಎಂಎ ಕೇರಳ ಘಟಕದ ಅಧ್ಯಕ್ಷ ಜುಲ್ಫಿ ಎಂ. ನುಹು, ಆಸ್ಪತ್ರೆಗಳ ಆಪರೇಷನ್ ಥಿಯೇಟರ್‌ನಲ್ಲಿ ಮುಖ್ಯ ವ್ಯಕ್ತಿ ರೋಗಿ. ರೋಗಿ ಯಾವುದೇ ಸೋಂಕಿಗೆ ಒಳಗಾಗದಂತೆ ತಡೆಯುವ ಪ್ರೋಟೋಕಾಲ್ ಅನ್ನು ವಿಶ್ವದಾದ್ಯಂತ ಒಪ್ಪಿಕೊಳ್ಳಲಾಗಿದೆ. ಇದನ್ನು ಎಲ್ಲರೂ ಒಪ್ಪಿ, ಪಾಲಿಸಿಕೊಂಡು ಮುನ್ನಡೆಯಬೇಕು ಎಂಬುದು ಐಎಂಎ ಕೇರಳ ಘಟಕದ ಅಭಿಪ್ರಾಯ ಎಂದು ಹೇಳಿದರು.

ಮುಸ್ಲಿಂ ವೈದ್ಯಕೀಯ ವಿದ್ಯಾರ್ಥಿನಿಯರು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಲಿನೆಟ್ ಜೆ. ಮೋರಿಸ್ ಅವರಿಗೆ ಪತ್ರ ಬರೆದು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಉದ್ದ ತೋಳಿನ ಸ್ಕ್ರಬ್ ಜಾಕೆಟ್‌ಗಳು ಮತ್ತು ಹಿಜಾಬ್ ತರಹದ ಸರ್ಜಿಕಲ್ ಹುಡ್‌ಗಳನ್ನು ಧರಿಸಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಭಾರತೀಯ ವೈದ್ಯಕೀಯ ಸಂಘ ನೀಡಿರುವ ಆದೇಶ ಪತ್ರದಲ್ಲಿ, ಅವರ ಧಾರ್ಮಿಕ ನಂಬಿಕೆಗಳ ಪ್ರಕಾರ ಮುಸ್ಲಿಂ ಮಹಿಳೆಯರಿಗೆ ಎಲ್ಲ ಸಂದರ್ಭಗಳಲ್ಲಿ ಹಿಜಾಬ್​ ಧರಿಸುವುದು ಕಡ್ಡಾಯವಾಗಿದೆ. ಆದರೆ ಆಪರೇಷನ್​ ಥಿಯೇಟರ್‌ನೊಳಗೆ ಮುಖ, ತಲೆ ಮುಚ್ಚಿಕೊಳ್ಳಲು ಹಿಜಾಬ್​ ಬಳಸಲು ಅವಕಾಶವಿಲ್ಲ ಎಂದು ಹೇಳಿದೆ.

ತಿರುವನಂತಪುರಂ ವೈದ್ಯಕೀಯ ಕಾಲೇಜಿನ 2018, 2020, 2021 ಮತ್ತು 2022 ಬ್ಯಾಚ್‌ಗಳ ಏಳು ವಿದ್ಯಾರ್ಥಿನಿಯರು ಸಹಿ ಮಾಡಿದ ಮನವಿ ಪತ್ರವನ್ನು ಪ್ರಾಂಶುಪಾಲರಿಗೆ ನೀಡಿದ್ದರು. 2020 ರ ಎಂಬಿಬಿಎಸ್ ಬ್ಯಾಚ್‌ನ ವಿದ್ಯಾರ್ಥಿನಿ ಅಫೀಫಾ ಎನ್‌.ಎ. ಈ ಪತ್ರವನ್ನು ಪ್ರಾಂಶುಪಾಲರಿಗೆ ನೀಡಿದ್ದರು. ಅದೇ ಸಮಯದಲ್ಲಿ, ವಿದ್ಯಾರ್ಥಿಗಳಿಂದ ಪತ್ರ ಸ್ವೀಕರಿಸಿದ ಬೆನ್ನಲ್ಲೇ ಸಮಸ್ಯೆಯ ಬಗ್ಗೆ ಚರ್ಚಿಸಲು ತಜ್ಞರ ಸಮಿತಿ ರಚಿಸಲು ಪ್ರಿನ್ಸಿಪಾಲ್ ಡಾ.ಲಿನ್ನೆಟ್ ಜೆ. ಮೋರಿಸ್ ನಿರ್ಧರಿಸಿದ್ದರು.

ಆಪರೇಷನ್ ಥಿಯೇಟರ್‌ನಲ್ಲಿ ಪೂರ್ಣ ತೋಳಿನ ಬಟ್ಟೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ಪತ್ರ ನೀಡಿದ ವಿದ್ಯಾರ್ಥಿನಿಯರಿಗೆ ತಿಳಿಸಲಾಗಿದೆ. ಆಪರೇಟಿಂಗ್ ಥಿಯೇಟರ್‌ಗಳು ಖಾಲಿ ಜಾಗ ಹೆಚ್ಚು ಇರುವ ಪ್ರದೇಶವಾಗಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕೈಗಳನ್ನು ಯಾವಾಗಲೂ ಮೊಣಕೈ ಕೆಳಗಿನವರೆಗೆ ಸ್ವಚ್ಛಗೊಳಿಸಬೇಕು. ಅದಕ್ಕಾಗಿಯೇ ಥಿಯೇಟರ್‌ ನಲ್ಲಿ ಅರ್ಧ ತೋಳಿನ ಉಡುಪುಗಳನ್ನು ಬಳಸಲಾಗುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸ್ವಚ್ಛ ವಾತಾವರಣ ಖಚಿತಪಡಿಸಿಕೊಳ್ಳಲು ವಿಶ್ವಾದ್ಯಂತ ಅಂಗೀಕರಿಸಲ್ಪಟ್ಟ ಕೆಲವು ಮಾನದಂಡಗಳಿವೆ. ರೋಗಿಯಲ್ಲಿ ಸೋಂಕನ್ನು ತಪ್ಪಿಸಲು ಇವುಗಳನ್ನು ನಿಖರವಾಗಿ ಅನುಸರಿಸಬೇಕು. ವಿದ್ಯಾರ್ಥಿಗಳು ಎತ್ತಿರುವ ಬೇಡಿಕೆ ಕುರಿತು ಸೋಂಕು ನಿಯಂತ್ರಣ ತಂಡದೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಪ್ರಾಂಶುಪಾಲ ಡಾ. ಲಿನ್ನೆಟ್ಟೆ ಜೆ ಮೋರಿಸ್ ಅವರು ಹತ್ತು ದಿನಗಳೊಳಗೆ ಪತ್ರಕ್ಕೆ ಪ್ರತಿಕ್ರಿಯಿಸುತ್ತಾರೆ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಲಾಗಿದೆ ಎಂದು ಐಎಂಎ ಕೇರಳ ಘಟಕದ ಅಧ್ಯಕ್ಷ ಜುಲ್ಫಿ ಎಂ ನುಹು ಹೇಳಿದ್ದಾರೆ.

ಇದನ್ನೂ ಓದಿ:ಆಪರೇಷನ್​ ಥಿಯೇಟರ್​ನಲ್ಲೂ ಹಿಜಾಬ್ ಧರಿಸಲು ಅವಕಾಶ ಕೊಡಿ: ಕೇರಳ ವಿದ್ಯಾರ್ಥಿನಿಯರಿಂದ ಪತ್ರ

ABOUT THE AUTHOR

...view details