ಕರ್ನಾಟಕ

karnataka

ETV Bharat / bharat

ಕೇರಳಕ್ಕೂ ಕಾಲಿಟ್ಟ ಹಿಜಾಬ್​ ವಿವಾದ.. ಸಮವಸ್ತ್ರ ಧರಿಸಲು ಸೂಚಿಸಿದ ಶಾಲೆಯ ವಿರುದ್ಧ ಪ್ರತಿಭಟನೆ - ಶಾಲೆಯ ವಿರುದ್ಧ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ

ಕರ್ನಾಟಕದಲ್ಲಿ ತೀವ್ರ ವಿವಾದವೆಬ್ಬಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿರುವ ಹಿಜಾಬ್​ ವಿವಾದ ಈಗ ಕೇರಳದಲ್ಲೂ ಕಾಣಿಸಿಕೊಂಡಿದೆ. ಹಿಜಾಬ್​ ಬಿಟ್ಟು ಶಾಲೆಯ ಸಮವಸ್ತ್ರ ಪಾಲಿಸಲು ಸೂಚಿಸಿದ ಶಾಲೆಯ ವಿರುದ್ಧ ಭಾರೀ ಪ್ರತಿಭಟನೆ ನಡೆಸಲಾಗಿದೆ.

hijab-controversy-in-kerala
ಕೇರಳಕ್ಕೂ ಕಾಲಿಟ್ಟ ಹಿಜಾಬ್​ ವಿವಾದ

By

Published : Sep 26, 2022, 5:41 PM IST

ಕ್ಯಾಲಿಕಟ್​, ಕೇರಳ:ಕರ್ನಾಟಕದಲ್ಲಿ ಸದ್ದು ಮಾಡಿದ್ದ ಹಿಜಾಬ್​ ವಿವಾದ ಈಗ ಕೇರಳಕ್ಕೂ ಕಾಲಿಟ್ಟಿದೆ. ಇಲ್ಲಿನ ಶಾಲೆಯೊಂದರಲ್ಲಿ ಹಿಜಾಬ್​ ಧರಿಸಲು ಅನುಮತಿ ನೀಡದ್ದಕ್ಕೆ ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದಾರೆ.

ಕೇರಳದ ಕ್ಯಾಲಿಕಟ್‌ನ ಪ್ರಾವಿಡೆನ್ಸ್ ಗರ್ಲ್ಸ್ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್​ ಧರಿಸದಂತೆ ಸೂಚಿಸಿ, ಶಾಲಾ ಸಮವಸ್ತ್ರ ನಿಯಮ ಪಾಲಿಸಲು ಹೇಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಇದರ ವಿರುದ್ಧ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ಮತ್ತು ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್ (ಎಂಎಸ್‌ಎಫ್) ವತಿಯಿಂದ ಶಾಲೆಯ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸಿ, ಶಾಲೆಗೆ ಮುತ್ತಿಗೆ ಹಾಕುವ ಯತ್ನ ನಡೆದಿದೆ.

ಕೇರಳಕ್ಕೂ ಕಾಲಿಟ್ಟ ಹಿಜಾಬ್​ ವಿವಾದ

ಹಿಜಾಬ್​ ಧಾರಣೆಯನ್ನು ವಿರೋಧಿಸಿದ ಶಾಲೆ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದೆ. ಶಾಲೆಯ ವಿರುದ್ಧ ಕ್ರಮ ಮತ್ತು ಅದರ ಆದೇಶವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಈ ವೇಳೆ ಶಾಲೆಯ ಮುಂದೆ ಹಾಕಲಾಗಿದ್ದ ಬ್ಯಾರಿಕೇಡ್​​ಗಳನ್ನು ತಳ್ಳಿ ಪ್ರತಿಭಟನಾಕಾರರು ದಾಂಧಲೆ ಎಬ್ಬಿಸಿದರು.

ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಚಕಮಕಿ ನಡೆದಿದೆ. ಪೊಲೀಸರನ್ನು ಭೇದಿಸಿಕೊಂಡು ಪ್ರತಿಭಟನಾಕಾರರು ಮುನ್ನುಗ್ಗುತ್ತಿದ್ದಾಗ ಇದನ್ನು ತಡೆಯಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್​ ಮಾಡಿದ್ದಾರೆ. ಇದಲ್ಲದೇ ಹಲವರನ್ನು ವಶಕ್ಕೆ ಪಡೆಯಲಾಗಿದೆ.

ಓದಿ:ಪಟಿಯಾಲ ಜೈಲಿನಲ್ಲಿ ಮೌನವ್ರತ ಆರಂಭಿಸಿದ ನವಜೋತ್ ಸಿಧು

ABOUT THE AUTHOR

...view details