ನವದೆಹಲಿ:ಕರ್ನಾಟಕದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಸಿಖ್ಖರು ಧರಿಸುವ ಟರ್ಬನ್(ಪೇಟ) ಪ್ರಸ್ತಾಪವಾಗಿದ್ದನ್ನು ಸುಪ್ರೀಂ ಆಕ್ಷೇಪಿಸಿದ್ದು, ಸಿಖ್ಖರು ಧರಿಸುವ ಪೇಟವನ್ನು ಹಿಜಾಬ್ಗೆ ಹೋಲಿಸುವುದು ಸೂಕ್ತವಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿ ಹೇಮಂತ್ ಗುಪ್ತಾ ನೇತೃತ್ವದ ಪೀಠವು ಸಿಖ್ಖರು ಧರಿಸುವ ಪೇಟಗಳು ಸಿಖ್ ಧರ್ಮದ ಐದು ಕಡ್ಡಾಯ ಅಂಶಗಳ ಭಾಗವಾಗಿದೆ. ಅದನ್ನು ಸುಪ್ರೀಂ ಕೋರ್ಟ್ ಕೂಡ ಗುರುತಿಸಿದೆ ಎಂದು ಹೇಳಿದರು.
ಸಿಖ್ಖರ ಟರ್ಬನ್ ಧಾರ್ಮಿಕ ಆಚರಣೆಯ ಕಡ್ಡಾಯ ಭಾಗವಾಗಿದೆ. ಹಿಜಾಬ್ ಧಾರ್ಮಿಕ ವಸ್ತ್ರವಲ್ಲ. ಹೀಗಾಗಿ ಸಿಖ್ಖರ ಪೇಟ ಮತ್ತು ಕಿರ್ಪಾನ್ ಧರಿಸುವುದು ಅತ್ಯಗತ್ಯ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು. ಮೂರನೇ ದಿನದ ವಿಚಾರಣೆಯ ವಾದ- ಪ್ರತಿವಾದದ ಬಳಿಕ ವಿಚಾರಣೆಯನ್ನು ಸೋಮವಾರಕ್ಕೆ(ಸೆ.12 ರಂದು) ಮುಂದೂಡಲಾಗಿದೆ.
ಮೊದಲ ದಿನದ ವಿಚಾರಣೆಯಲ್ಲಿ ಫಿರ್ಯಾದುದಾರರ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ದೇವದತ್ ಕಾಮತ್ ಅವರು, ಬಟ್ಟೆಯ ವಿಚಾರದಲ್ಲಿ ಸರ್ಕಾರ ಮಕ್ಕಳ ಶಿಕ್ಷಣವನ್ನು ಹಾಳು ಮಾಡುತ್ತಿದೆ ಎಂದು ದೂರಿದ್ದರು. ಈ ವೇಳೆ ಪೀಠ, ಮಕ್ಕಳು ಶಾಲೆಯೊಳಗೆ ಮಿಡಿ, ಸ್ಕರ್ಟ್ ಧರಿಸಿ ಬರಬಹುದೇ ಎಂದು ಪ್ರಶ್ನಿಸಿದ್ದರು. ಹೀಗಾಗಿ ಶಿಕ್ಷಣಕ್ಕೂ, ಬಟ್ಟೆಗೂ ಸಂಬಂಧವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.
ನಿನ್ನೆ ನಡೆದ ಎರಡನೇ ದಿನದ ವಿಚಾರಣೆಯಲ್ಲಿ "ಹಿಜಾಬ್ ಧರಿಸುವುದು ಹಕ್ಕು" ಎಂದು ವಾದ ಮಂಡಿಸಿದಾಗ ಕೋರ್ಟ್, ಧರಿಸುವ ಹಕ್ಕಿದ್ದರೆ, ಅದನ್ನು ಧರಿಸದೇ ಇರುವ ಹಕ್ಕೂ ಇದೆ ಎಂದು ನ್ಯಾಯಾಧೀಶರು ಹೇಳಿದ್ದರು. ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಓದಿ:ಕೆಲವರು ಧೋತಿ ಬೇಕಂತಾರೆ, ಇನ್ನೂ ಕೆಲವರಿಗೆ ಸಲ್ವಾರ್ ಕಮೀಜ್ ಇಷ್ಟ: ಹಿಜಾಬ್ ವಿಚಾರಣೆ ವೇಳೆ ಸುಪ್ರೀಂ ಅಭಿಪ್ರಾಯ