ನವದೆಹಲಿ:ಕರ್ನಾಟಕದ ಶಾಲಾ ಆವರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಬಳಕೆ ನಿರ್ಬಂಧಿಸಿದ ಪ್ರಕರಣವನ್ನು ಮರು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಇದಕ್ಕಾಗಿ ಶೀಘ್ರವೇ ದಿನಾಂಕ ನಿಗದಿಪಡಿಸಲಾಗುವುದು. ಕೋರ್ಟ್ ರಿಜಿಸ್ಟ್ರಾರ್ ಮುಂದೆ ವಿಷಯ ಪ್ರಸ್ತಾಪಿಸಲು ಉಭಯ ವಕೀಲರಿಗೆ ಸೂಚಿಸಿದೆ. ಕಳೆದ ವರ್ಷ ಹಿಜಾಬ್ ಕೇಸಲ್ಲಿ ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠ ಭಿನ್ನಮತದ ತೀರ್ಪು ನೀಡಿದ್ದು, ಮತ್ತೆ ಇದೀಗ ಸಾಂವಿಧಾನಿಕ ಪೀಠದ ಮುಂದೆ ಮರು ವಿಚಾರಣೆ ನಡೆಯಲಿದೆ.
ಕಳೆದ ವರ್ಷ ಸುಪ್ರೀಂ ಭಿನ್ನ ತೀರ್ಪು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಕಳೆದ ವರ್ಷದ ಅಕ್ಟೋಬರ್ನಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಭಿನ್ನ ತೀರ್ಪು ನೀಡಿತ್ತು. ನ್ಯಾ.ಹೇಮಂತ್ ಗುಪ್ತಾ ಅವರು ಹಿಜಾಬ್ ನಿಷೇಧವನ್ನು ಎತ್ತಿಹಿಡಿದರೆ, ಸುಧಾಂಶು ಧುಲಿಯಾ ಅವರು ಕರ್ನಾಟಕ ಸರ್ಕಾರದ ಅಧಿಸೂಚನೆ, ಹೈಕೋರ್ಟ್ ತೀರ್ಪನ್ನು ರದ್ದುಪಡಿಸಿ ಆದೇಶಿಸಿದ್ದರು.
ಈಗ ಕೋರ್ಟ್ ಹೇಳಿದ್ದೇನು?: ನ್ಯಾಯಾಧೀಶರ ಭಿನ್ನ ತೀರ್ಪಿನಿಂದಾಗಿ ಪ್ರಕರಣ ಇತ್ಯರ್ಥ ಕಾಣದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮುಂದೆ ಪ್ರಕರಣ ಬಂದಿತ್ತು. ಇದೀಗ ವಿಸ್ತೃತ ಪೀಠದ ಮುಂದೆ ವಿಚಾರಣೆ ನಡೆಸಲು ಒಪ್ಪಿರುವ ಸಿಜೆಐ ತ್ರಿ ಸದಸ್ಯ ಪೀಠಕ್ಕೆ ಪ್ರಕರಣ ವರ್ಗಾಯಿಸಿದ್ದಾರೆ. ಶೀಘ್ರವೇ ದಿನಾಂಕ ನಿಗದಿ ಮಾಡಲಾಗುವುದು. ಪ್ರಕರಣವನ್ನು ಕೈಗೆತ್ತಿಕೊಳ್ಳಲು ಸೂಚಿಸಿ ರಿಜಿಸ್ಟ್ರಾರ್ಗೆ ವಿಷಯ ಸೂಚಿಸಲು ತಿಳಿಸಿದ್ದಾರೆ.
ಅರ್ಜಿದಾರರ ಕಳವಳ: ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಕುರಿತಾಗಿ ತುರ್ತು ವಿಚಾರಣೆ ನಡೆಸಲು ವಿದ್ಯಾರ್ಥಿಗಳು ಮತ್ತು ಸಂಘಟನೆಗಳು ಕೋರಿದ್ದರು. ನಿಷೇಧದಿಂದಾಗಿ ರಾಜ್ಯದಲ್ಲಿ ಮುಸ್ಲಿಂ ಹುಡುಗಿಯರು ಶಿಕ್ಷಣದ ಮೂಲಭೂತ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಆರೋಪಿಸಿವೆ. ಹಿಜಾಬ್ ನಿಷೇಧದ ನಂತರ ಭುಗಿಲೆದ್ದ ವಿವಾದದಿಂದಾಗಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಈಗಾಗಲೇ ಒಂದು ಶೈಕ್ಷಣಿಕ ವರ್ಷವನ್ನು ಕಳೆದುಕೊಂಡಿದ್ದಾರೆ ಎಂದು ಅರ್ಜಿದಾರರು ಕಳವಳ ವ್ಯಕ್ತಪಡಿಸಿದ್ದಾರೆ.
ಇದು ಕರ್ನಾಟಕ ಹೈಕೋರ್ಟ್ ತೀರ್ಪು:ಹಿಜಾಬ್ ಧಾರಣೆ ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ಸಮವಸ್ತ್ರ ಕುರಿತು ಸರ್ಕಾರ ಏನು ಆದೇಶ ನೀಡಿತ್ತೋ ಅದು ಸರಿಯಾಗಿದೆ. ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಅದರ ಪ್ರಕಾರ ಪಾಲನೆ ಮಾಡಬೇಕು. ಸರ್ಕಾರ ಶಾಲಾ, ಕಾಲೇಜುಗಳಿಗೆ ಏನು ವಸ್ತ್ರಸಂಹಿತೆ ನೀಡಿದೆಯೋ, ಶಾಲೆ ಏನು ಸಮವಸ್ತ್ರ ನಿಯಮ ನೀಡುತ್ತದೋ ಅದನ್ನು ಎಲ್ಲ ವಿದ್ಯಾರ್ಥಿಗಳು ಪಾಲನೆ ಮಾಡಬೇಕು ಎಂದು ಹೈಕೋರ್ಟ್ ಮಾರ್ಚ್ನಲ್ಲಿ ತೀರ್ಪು ನೀಡಿತ್ತು.
ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್, ನ್ಯಾ.ಎಸ್ ಕೃಷ್ಣ ದೀಕ್ಷಿತ್ ಅವರಿದ್ದ ತ್ರಿಸದಸ್ಯ ಪೀಠ ಶಾಲಾ, ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಯಾವುದೇ ಶಾಲಾ ಕಾಲೇಜುಗಳು ಹಿಜಾಬ್ ಧರಿಸಲು ಅವಕಾಶ ನೀಡಿಲ್ಲ ಎಂದರೆ ಅದು ಹಿಜಾಬ್ ಕುರಿತು, ಧಾರ್ಮಿಕ ಹಕ್ಕಿನ ಕುರಿತು ಉಲ್ಲಂಘನೆ ಮಾಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪಿನಲ್ಲಿ ತಿಳಿಸಿತ್ತು.
ಇದನ್ನೂ ಓದಿ:ಪ್ರಾದೇಶಿಕ ಭಾಷೆಗಳಲ್ಲಿಯೂ ಸುಪ್ರೀಂ ಕೋರ್ಟ್ ತೀರ್ಪು: ಸಿಜೆಐ ಅಭಿಪ್ರಾಯ ಶ್ಲಾಘಿಸಿದ ಪ್ರಧಾನಿ ಮೋದಿ