ನವದೆಹಲಿ: ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿದ ಕರ್ನಾಟಕ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸೇರಿದಂತೆ ಇದಕ್ಕೆ ಸಂಬಂಧಿಸಿದ ಅರ್ಜಿಗಳ ಮೇಲಿನ 10 ನೇ ದಿನದ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಗುರುವಾರ ಆರಂಭವಾಗಿದೆ.
ಆರಂಭದಲ್ಲಿ ಅರ್ಜಿದಾರರ ಪರ ವಾದ ಮಂಡಿಸುತ್ತಿರುವ ವಕೀಲ ದುಶ್ಯಂತ ದವೆ ತಮ್ಮ ಮರುಪ್ರಶ್ನೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲು ಆರಂಭಿಸಿದ್ದಾರೆ. ಸುತ್ತೋಲೆಯೊಂದನ್ನು ನ್ಯಾಯಾಲಯದ ಮುಂದಿಟ್ಟ ದವೆ, ಈ ಸುತ್ತೋಲೆಯಲ್ಲಿ ತುಂಬಾ ಕುತೂಹಲಕರವಾದ ವಿಷಯಗಳಿವೆ ಎಂದರು. ಸುತ್ತೋಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಬಗ್ಗೆ ಯಾವುದೇ ಉಲ್ಲೇಖವಿಲ್ಲ.. ಆದರೆ ಸಾಲಿಸಿಟರ್ ಜನರಲ್ ಅವರು ಆ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಲು ನಾನು ವಿಷಾದಿಸುತ್ತೇನೆ. ಆದರೆ ಆ ವಿಷಯ ಪ್ರಸ್ತುತವಲ್ಲ ಮತ್ತು ಅವರು ಅದನ್ನು ಎತ್ತಿದ್ದರಿಂದ ಇಡೀ ಮಾಧ್ಯಮಗಳು ಅದನ್ನು ಪ್ರಸಾರ ಮಾಡತೊಡಗಿದವು ಎಂದರು.